ಬೆಂಗಳೂರು, ಏ.20: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಗಾಗಿ ಮತಯಾಚನೆ ವೇಳೆ ಬೆದರಿಕೆ ಆರೋಪದ ಹಿನ್ನಲೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರ್.ಆರ್ ನಗರ ಅಪಾರ್ಟ್ಮೆಂಟ್ ವೊಂದರಲ್ಲಿ ಮತಯಾಚನೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮತದಾರರಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ ಮಾಹಿತಿ ಪಡೆದು ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಲಂಚ, ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬಳಸಿರೋ ಆರೋಪ
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಅಗಿರುವ ಸಹೋದರ ಡಿ.ಕೆ ಸುರೇಶ್ ಪರ ಡಿಸಿಎಂ ಡಿ.ಕೆ ಶಿವಕುಮಾರ್ ಮತಯಾಚನೆ ಮಾಡಿದ್ದರು. ಈ ವೇಳೆ ಮತದಾರರಿಗೆ ಬೆದರಿಕೆ ಹಾಕಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆ ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬಳಸಿರೋ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.
ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ ಡಿಸಿಎಂ
ಡಿ.ಕೆ ಶಿವಕುಮಾರ್ ಮತದಾರರನ್ನು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿತ್ತು. ಅದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಿರುವ ವಿಡಿಯೋವನ್ನೂ ಕೂಡ ಹಂಚಿಕೊಂಡಿತ್ತು. ‘ನಾನು ಇಲ್ಲಿಗೆ ವ್ಯವಹಾರಕ್ಕಾಗಿ ಬಂದಿದ್ದೇನೆ. ಈ ಅಪಾರ್ಟ್ಮೆಂಟ್ನಲ್ಲಿ 2510 ಮನೆಗಳಿವೆ. 6424 ಮತಗಳಿವೆ. ನಿಮ್ಮ ಎರಡು ಸಮಸ್ಯೆಗಳೆಂದರೆ ಹಕ್ಕುಪತ್ರ ನಿಮಗೆ ಹಸ್ತಾಂತರವಾಗದಿರುವುದು. ಎರಡನೇಯದ್ದು ಕಾವೇರಿ ನೀರು ಸಂಪರ್ಕ ದೊರೆಯದೇ ಇರುವುದು. ಒಂದು ವೇಳೆ ಈ ಎರಡನ್ನೂ ನಾನು ನಿಮಗೆ ನೀಡಿದರೆ ನೀವು ನನಗೆ ಏನು ಕೊಡುತ್ತೀರಾ?, ನಿಮ್ಮ ಬೂತ್ ಆರ್ಆರ್ ನಗರದಲ್ಲಿದೆ. 2 ರಿಂದ 3 ಬೂತ್ನಲ್ಲಿ ನಮ್ಮ ಪರವಾದ ಮತಗಳಿವೆ. ಪ್ರಶ್ನಾರ್ಥಕವಾಗಿ ಉಳಿದಿರುವುದು ನಿಮ್ಮ ಬೂತ್ ಮಾತ್ರ. ಈಗ ಹೇಳಿ ಏನು ಮಾಡುತ್ತೀರಿ?’ ಎಂದು ಡಿಕೆಶಿ ಕೇಳುತ್ತಿರುವುದು ಬಿಜೆಪಿ ಟ್ವೀಟ್ ಮಾಡಿದ ವಿಡಿಯೋದಲ್ಲಿತ್ತು. ಈ ಹಿನ್ನಲೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.