ಕ್ರೀಡೆ ಸುದ್ದಿ

ಡೆಲ್ಲಿ ಕ್ಯಾಪಿಟಲ್ಸ್ಗೆ ರೋಚಕ ಜಯ

Share It

ನವದೆಹಲಿ: ಟಾಟಾ ಐಪಿಎಲ್‌ನ 40 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಮೇಲೇರಿದೆ.

ರಶೀದ್ ಖಾನ್ ಅವರ ಕೊನೆಯ ಕ್ಷಣದ ಭರ್ಜರಿ ಬ್ಯಾಟಿಂಗ್, ಮಿಲ್ಲರ್ ಅವರ ಅರ್ಧಶತಕದ ನಡುವೆಯೂ ನಿಗದಿತ ಗುರಿಯನ್ನು ಮುಟ್ಟಲು ಗುಜರಾತ್ ಟೈಟಾನ್ಸ್ಗೆ ಸಾಧ್ಯವಾಗಲಿಲ್ಲ. ಹೀಗಾಗಿ, ರನ್ ಚೇಸ್‌ನಲ್ಲಿ ದಾಖಲೆ ನಿರ್ಮಿಸುವ ಅವಕಾಶವನ್ನು ಗುಜರಾತ್ ಟೈಟಾನ್ಸ್ ಕಳೆದುಕೊಂಡಿತು. ಕೊನೆಯ ಎಸೆತದಲ್ಲಿ ಐದು ರನ್‌ಗಳಿಸಬೇಕಿದ್ದ ಕಾರಣ, ಕೇವಲ ಒಂದು ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಆ ಮೂಲಕ 3 ರನ್‌ಗಳ ಅಂತರ ಸೋಲು ಕಂಡಿತು.

ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 19 ರನ್‌ಗಳ ಅವಶ್ಯಕತೆಯಿತ್ತು. ಮುಕೇಶ್ ಕುಮಾರ್ ಎಸೆದ ಆ ಓವರ್‌ನ ಮೊದಲ ಎರಡು ಎಸೆತಗಳಲ್ಲಿಯೇ ರಶೀದ್ ಖಾನ್ ಸತತ ಬೌಂಡರಿ ಭಾರಿಸುವ ಮೂಲಕ ಗೆಲುವಿನ ಆಸೆ ಚಿಗುರಿಸಿದರು. ಆನಂತರ ಮುಕೇಶ್ ಅವರ ಉತ್ತಮ ಎಸೆತಕ್ಕೆ ಉತ್ತರ ನೀಡಲು ಸಾಧ್ಯವಾಗದೆ, ಎರಡು ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ.

ಐದನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ಸೆಣೆಸಾಟವನ್ನು ಕೊನೆಯ ಎಸೆತಕ್ಕೆ ಕೊಂಡೊಯ್ದರು. ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ನೀಡಿದ ಮುಕೇಶ್ ಗೆಲುವಿಗೆ ಕಾರಣವಾದರು.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಅಕ್ಸರ್ ಪಟೇಲ್ ಮತ್ತು ವೃಷಬ್ ಪಂತ್ ಅವರ ಅರ್ಧಶತಕಗಳ ನೆರವಿನಿಂದ 224 ರನ್‌ಗಳ ಬೃಹತ್ ಮೊತ್ತ ಪೇರಿಸಿದರು. ಪಂತ್ 43 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳ ಮೂಲಕ 88 ರನ್ ಸಿಡಿಸಿದರೆ, ಅಕ್ಸರ್ 43 ಎಸೆತಗಳಲ್ಲಿ 4 ಸಿಕ್ಸರ್‌ಗಳ ಸಹಾಯದಿಂದ 66 ರನ್ ಗಳಿಸಿದರು. ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್ 7 ಎಸೆತಗಳಲ್ಲಿ 26 ರನ್ ಭಾರಿಸಿದರು.

ಬೃಹತ್ ಮೊತ್ತ ಬೆನ್ನತ್ತಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ ಉತ್ತಮ ಆರಂಭ ನೀಡಿದರು. ಸಹಾ 39 ರನ್ ಗಳಿಸಿ ಔಟಾದರೆ, ಸಾಯಿ ಸುದರ್ಶನ್ ಭರ್ಜರಿ 65 ರನ್ ಭಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಗುಡುಗುವ ಮೂಲಕ ಗೆಲುವಿನಾಸೆ ಜೀವಂತವಾಗಿರಿಸಿದರು. ಅವರು 23 ಎಸೆತಗಳಲ್ಲಿ 55 ರನ್‌ಗಳಿಸಿ ಔಟಾದರೆ, ರಶೀದ್ ಖಾನ್ ಕೊನೆಯವರೆಗೆ ಹೋರಾಟ ನಡೆಸಿದರು. ಅವರು 11 ಎಸೆತೆಗಳಲ್ಲಿ 22 ರನ್‌ಗಳಿಸಿ ಔಟಾಗದೆ ಉಳಿದರು. ಆದರೆ, ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. ಸಲಾಂ ಮೂರು ವಿಕೆಟ್ ಪಡೆದು ಮಿಂಚಿದರು.


Share It

You cannot copy content of this page