ಧಾರವಾಡ: ಹುಬ್ಬಳ್ಳಿಯಲ್ಲಿ ಹಾಡಹಗಲೇ ಎಂ.ಸಿ.ಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ನಡೆದು ಒಂದು ವಾರ ಗತಿಸಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯಸರ್ಕಾರ ಒಪ್ಪಿಸಿದೆ.
ತನಿಖೆಯನ್ನು ಅರಂಭಿಸಿರುವ ಸಿಐಡಿ ಅಧಿಕಾರಿಗಳು ಇಂದು ಹುಬ್ಬಳ್ಳಿಯ ಜೈಲಿನಲ್ಲಿದ್ದ ಕೊಲೆ ಆರೋಪಿ ಫಯಾಜ್ ನನ್ನು ತಮ್ಮ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ಫಯಾಜ್ ನನ್ನು ಧಾರವಾಡದ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಧಿಕಾರಿಗಳು ಕರೆತಂದರು.
ಟೀ ಶರ್ಟ್ ಧರಿಸಿರುವ ಫಯಾಜ್ ಮುಖಕ್ಕೆ ಮುಖವಾಡ ಹಾಕಿ ಆಸ್ಪತ್ರೆಗೆ ತರಲಾಯಿತು. ಫಯಾಜ್ ನ ಹೇಳಿಕೆಗಳು ಇದುವರೆಗೆ ಎಲ್ಲೂ ದಾಖಲಾಗಿಲ್ಲ. ನೇಹಾಳನ್ನು ಕೊಲ್ಲುವ ಉದ್ದೇಶ ಏನಾಗಿತ್ತು? ಅನ್ನೋದನ್ನು ಅವನು ಇನ್ನೂ ಬಾಯ್ಬಿಟ್ಟಿಲ್ಲ! ಚುನಾವಣಾ ಸಮಯದಲ್ಲಿ ನೇಹಾ ಹತ್ಯೆ ನಡೆದಿರುವುದರಿಂದ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ.
ಒಬ್ಬ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕೊಂದಿರುವ ಹಿನ್ನೆಲೆಯಲ್ಲಿ ಇದು ಬಹಳ ಸೂಕ್ಷ್ಮ ಪ್ರಕರಣವಾಗಿದೆ. ಏತನ್ಮಧ್ಯೆ, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಇಂದು ನೇಹಾ ಹಿರೇಮಠ ಮನೆಗೆ ಹೋಗಿ ಕುಟುಂಬದ ಸದಸ್ಯರನ್ನು ಮಾತಾಡಿಸಿದರು.