ಬೇಲೂರು: ಕೋಳಿ ತಿನ್ನಲು ಬಂದ ಚಿರತೆಯೊಂದು ಉರುಳಿಗೆ ಸಿಲುಕಿ ಸತತ 8 ಗಂಟೆಗಳ ಕಾಲ ಪರದಾಡಿ ಜೀವ ಉಳಿಸಿಕೊಂಡು ಪರಾರಿಯಾಗಿರುವ ಘಟನೆ ಬೇಲೂರು ತಾಲ್ಲೂಕಿನ ಹಗರೆ ಸಮೀಪದ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನಪುರ ಗ್ರಾಮಕ್ಕೆ ಶುಕ್ರವಾರ (ನಿನ್ನೆ) ರಾತ್ರಿ ಆಹಾರ ಅರಸಿ ಬಂದಿದ್ದ ಚಿರತೆ ಕೋಳಿ ತಿನ್ನಲೆಂದು ಗ್ರಾಮದ ಚಂದ್ರಯ್ಯ ಎಂಬುವರ ಮನೆಯ ಕೊಟ್ಟಿಗೆ ಬಳಿ ಬಂದಿತ್ತು. ಚಿರತೆ ನೋಡಿದ ಕೋಳಿಗಳು ಹೆದರಿ ಮರಕ್ಕೆ ಹಾರಿವೆ. ಚಿರತೆಯು ಸಹ ಕೋಳಿಗಳನ್ನು ಬೇಟೆಯಾಡುವ ಭರದಲ್ಲಿ ಮರವನ್ನು ಹತ್ತಿದೆ.
ಈ ವೇಳೆ ಕೋಳಿ ರಕ್ಷಣೆಗೆಂದು ಇಟ್ಟಿದ್ದ ಉರುಳಿನ ತಂತಿಗೆ ಚಿರತೆಯ ಮುಂಗಾಲು ಸಿಲುಕಿಕೊಂಡಿದೆ. ಇದನ್ನು ಕಂಡ ನಾಯಿಗಳು ಜೋರಾಗಿ ಬೊಗಳತೊಡಗಿದ್ದರಿಂದ ಗ್ರಾಮದ ಜನರು ಹೊರಬಂದು ನೋಡಿದಾಗ ಚಿರತೆ ಕಂಡು ಬಂದಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸುವ ವೇಳೆಗೆ ಚಿರತೆ ಉರುಳಿನಿಂದ ಬಿಡಿಸಿಕೊಂಡು ಪರಾರಿಯಾಗಿದೆ. ಚಿರತೆ ಕಂಡ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಅದನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಸದ್ಯ ಚಿರತೆ ಸೆರೆಗಾಗಿ ಗ್ರಾಮದಲ್ಲಿ ಬೋನನ್ನು ಇರಿಸಲಾಗಿದೆ. ಆದಾಗ್ಯೂ ಮಲ್ಲಿಕಾರ್ಜುನಪುರ ಗ್ರಾಮದಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಅರಣ್ಯ ಇಲಾಖೆಯ ಬೋನಿಗೆ ಸಿಗದೆ ಪರಾರಿಯಾಗಿರುವ ಚಿರತೆ ಬಗ್ಗೆ ಭಯ ಆವರಿಸಿದೆ.
ಸದ್ಯ ಮಲ್ಲಿಕಾರ್ಜುನಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾರೂ ರಾತ್ರಿ ಓಡಾಡದಂತಹ ಭಯದ ವಾತಾವರಣವನ್ನು ತಪ್ಪಿಸಿಕೊಂಡು ಪರಾರಿಯಾಗಿರುವ ಚಿರತೆ ಸೃಷ್ಟಿಸಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ತಪ್ಪಿಸಿಕೊಂಡಿರುವ ಚಿರತೆ ಹಿಡಿಯಲು ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.