ಮಹಿಳಾ ಹೋಂ ಗಾರ್ಡ್ ಮೇಲೆ ಯುವತಿಯಿಂದ ಹಲ್ಲೆ: FIR ದಾಖಲು
ಬೆಂಗಳೂರು: ಕ್ಲುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ಮಹಿಳಾ ಹೋಂ ಗಾರ್ಡ್ ಗೆ ಮನಸೋಯಿಚ್ಛೆ ಥಳಿಸಿದ್ದು, ಆಕೆಯ ವಿರುದ್ಧ FIR ದಾಖಲಿಸಿ ಆಕೆಯನ್ನು ಬಂಧಿಸಲಾಗಿದೆ.
ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಕೆ.ಆರ್.ಪುರ ರೈಲ್ವೇ ನಿಲ್ದಾಣದ ಜಂಕ್ಷನ್ ನಲ್ಲಿ ಸಂಚಾರಿ ನಿಯಂತ್ರಣಕ್ಕೆ ನೇಮಕವಾಗಿದ್ದ ಮಹಿಳಾ ಹೋಂ ಗಾರ್ಡ್ ಲಕ್ಷ್ಮೀ ನರಸಮ್ಮ ಹಲ್ಲೆಗೊಳಗಾದವರು. ಹಲ್ಲೆ ಮಾಡಿದ ಯುವತಿಯನ್ನು ಮೋಹಿನಿ ಎಂದು ಹೇಳಲಾಗಿದೆ. ಈಗ ಆಕೆಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೋಹಿನಿ ತುಂಡುಡುಗೆ ತೊಟ್ಟು ಜಂಕ್ಷನ್ ನಲ್ಲಿ ನಿಂತಿದ್ದರು. ಇದನ್ನು ನೋಡಿ ಕೆಲ ಕಿಡಿಗೇಡಿಗೇಡಿಗಳು ಆಕೆಯನ್ನು ರೇಗಿಸುತ್ತಿದ್ದರು. ಹೋಂ ಗಾರ್ಡ್ ಅವರನ್ನು ಬೆದರಿಸಿ ಕಳುಹಿಸಿದ ನಂತರ, ಮೋಹಿನಿಗೆ ಹೀಗೆಲ್ಲ ಬಟ್ಟೆ ಹಾಕದಂತೆ ಸಲಹೆ ನೀಡಿದರು. ಅವರ ಸಲಹೆಯಿಂದ ಕೋಪಗೊಂಡ ಮೋಹಿನಿ, ಹೋಂ ಗಾರ್ಡ್ ಲಕ್ಷ್ಮಿ ನರಸಮ್ಮನ ಜುಟ್ಟು ಹಿಡಿದು ಹಲ್ಲೆ ಮಾಡಿದ್ದಾರೆ.
ಘಟನೆಯ ವೇಳೆ ಅನೇಕರು ಹೋಂ ಗಾರ್ಡ್ ರಕ್ಷಣೆಗೆ ಬಂದರಾದರೂ, ಯುವತಿ ಆಕೆಯ ಜುಟ್ಟು ಬಿಡದೆ ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


