ಬೆಂಗಳೂರು : ಬಿಜೆಪಿ ಅಧಿಕೃತ ಎಕ್ಸ್ ಖಾತೆ ಮೇಲೆ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆ ಕುರಿತು ‘ಕೈ’ ಪ್ರಣಾಳಿಕೆಯೋ, ಮುಸ್ಲಿಂ ಲೀಗ್ ಪ್ರಣಾಳಿಕೆಯೋ ಎಂದು ಬಿಜೆಪಿ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು. ಈ ಬಗ್ಗೆ ಎಫ್ಎಸ್ಟಿ ತಂಡ ಮಲ್ಲೇಶ್ವರಂ ಠಾಣೆಗೆ ದೂರು ನೀಡಿತ್ತು. ಈ ಹಿನ್ನಲೆ ಆರ್ ಪಿ ಆಕ್ಟ್ 125 ಮತ್ತು ಐಪಿಸಿ 153 ಅಡಿಯಲ್ಲಿ ದ್ವೇಷ ಮತ್ತು ಎರಡು ಗುಂಪುಗಳ ನಡುವೆ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ ಆರೋಪ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಇನ್ನು ಇದೇ ಏಪ್ರಿಲ್ 20 ರಂದು ಕೋಮು ಸೌಹಾರ್ದತೆಗೆ ದಕ್ಕೆ ತರಲು ಯತ್ನಿಸಿದ ಆರೋಪದ ಹಿನ್ನಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ಪೋಸ್ಟ್ ಹಾಕಲಾಗಿತ್ತು. ಹೀಗಾಗಿ ಬಿ.ವೈ ವಿಜಯೇಂದ್ರ ಹಾಗೂ ಖಾತೆ ನಿರ್ವಹಣೆ ಮಾಡುವವರ ವಿರುದ್ದ ಪ್ರಕರಣ ದಾಖಲಾಗಿತ್ತು.
ಇನ್ನು ಪ್ರಚಾರದ ವೇಳೆ ಬೆದರಿಕೆ ಹಾಕಿದ ಆರೋಪದ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೂ ಎಫ್ಐಆರ್ ದಾಖಲಾಗಿತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪರ ಪ್ರಚಾರದ ವೇಳೆ ಮತದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಅಧಿಕೃತ ಎಕ್ಸ್ ಖಾತೆ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.