ಬೆಂಗಳೂರು: ಸರಕಾರದ ಹುದ್ದೆಗಳ ಮಾದರಿಯಲ್ಲಿ ಗುತ್ತಿಗೆ ಆಧಾರದ ನೇಮಕಾತಿಯಲ್ಲಿಯೂ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಅಧಿಕೃತ ಸುತ್ತೋಲೆ ಹೊರಡಿಸಿರುವ ಸರಕಾರ, ಡಿಸೆಂಬರ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಹೊರಗುತ್ತಿಗೆಯಲ್ಲಿ ಮೀಸಲಾತಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆದೇಶ ನೀಡಿದೆ.
ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ಗುತ್ತಿಗೆ ನೌಕರರಿಗೆ ಅನ್ವಯ ಆಗುವುದಿಲ್ಲ. ಪ್ರತಿ ವರ್ಷ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ಒದಗಿಸುವ ಏಜೆನ್ಸಿಗಳಿಗೆ ಕಡ್ಡಾಯ ಮೀಸಲಾತಿ ನಿಯಮಗಳನ್ನು ಅನುಸರಿಸುವಂತೆ ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಎಸ್.ಸಿ, ಎಸ್.ಟಿ, ಒಬಿಸಿ ಮೀಸಲಾತಿ ಅನ್ವಯ ಆಗುವ ನೇಮಕಾತಿಯಲ್ಲಿ ಶೇ. 33 ರಷ್ಟು ಮೀಸಲಾತಿ ಮಹಿಳೆಯರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಟೆಂಡರ್ ನೀಡುವ ಪ್ರಾಧಿಕಾರ ಹೊರಗುತ್ತಿಗೆ ಏಜೆನ್ಸಿ, ಮೀಸಲಾತಿ ಅನ್ವಯ ಜಾತಿ ದೃಢೀಕರಣ ಪತ್ರ ಪಡೆದು, ಮೀಸಲಾತಿ ನಿಗದಿಪಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ.
ಮೀಸಲಾತಿ ಅಡಿ ನೇಮಕವಾದ ಸಿಬ್ಬಂದಿ ಅರ್ಧದಲ್ಲಿ ಬಿಟ್ಟು ಹೋದಲ್ಲಿ, ಮರು ನೇಮಕಾತಿ ಮಾಡುವಾಗ ಅದೇ ಪ್ರವರ್ಗದ ಅಭ್ಯರ್ಥಿಗಳ ಆಯ್ಕೆ ಮಾಡುವಂತೆ ಏಜೆನ್ಸಿಗಳಿಗೆ ಸೂಚನೆ ನೀಡಬೇಕು. ಮೀಸಲಾತಿ ಕನಿಷ್ಠ 20 ಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಅನ್ವಯವಾಗುತ್ತದೆ ಎಂದು ಸರಕಾರ ತಿಳಿಸಿದೆ.
ಕನಿಷ್ಠ ವಯೋಮಿತಿ 18 ವರ್ಷದಿಂದ ಗರಿಷ್ಠ ವಯೋಮಿತಿ 60 ವರ್ಷದವರೆಗಿನ ಸಿಬ್ಬಂದಿಯನ್ನು ಮೀಸಲಾತಿ ಕೋಟಾದಡಿ ನೇಮಕ ಮಾಡಿಕೊಳ್ಳಲು ಅವಕಾಶವಿರುತ್ತದೆ. ಇದು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಆದೇಶವಾಗಿದ್ದು, ಯಾವುದೇ ಕಾರಣಕ್ಕೂ ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.