ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸೋಮವಾರ ಇಡೀ ದಿನ ಎಸ್‌ಐಟಿ ಪರ ವಕೀಲರು ಮತ್ತು ರೇವಣ್ಣ ಅವರ ಪರ ವಕೀಲರ ವಾದ ವಿವಾದವನ್ನು ಆಲಿಸಿದ, ನ್ಯಾಯಾಲಯ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತು. ಎಸ್‌ಐಟಿ ತನಿಖೆಗೆ ಯಾವುದೇ ರೀತಿಯಲ್ಲಿ ಅಸಹಕಾರ ನೀಡುವಂತಿಲ್ಲ, ಸಾಕ್ಷಿಗಳನ್ನು ನಾಶಪಡಿಸುವಂತಹ ಯಾವುದೇ ನಡೆ ಕಂಡುಬAದರೆ ಜಾಮೀನು ವಾಪಸ್ ಪಡೆಯಲಾಗುವುದು ಎಂದು ತಿಳಿಸಿದೆ.
ಜತೆ ಅಪಹರಣ ಪ್ರಕರಣವಾದ್ದರಿಂದ ಪ್ರಕರಣ ದಾಖಲಾಗಿರುವ ಕೆ.ಆರ್.ನಗರ ತಾಲೂಕು ವ್ಯಾಪ್ತಿಯನ್ನು ಪ್ರವೇಶಿಸುವಂತಿಲ್ಲ ಎಂದು ಷರತ್ತು ವಿಧಿಸಿರುವ ನ್ಯಾಯಾಲಯ ಸಾಕ್ಷಿನಾಶ ಮಾಡುವಂತಿಲ್ಲ ಎಂದಿದೆ. ಕಳೆದ ಐದು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇವಣ್ಣ ಅವರಿಗೆ ಇದರಿಂದ ರಿಲೀಫ್ ಸಿಕ್ಕಂತಾಗಿದೆ.
ಇಂದು ಬಿಡುಗಡೆ ಭಾಗ್ಯವಿಲ್ಲ: ಜಾಮೀನು ಮಂಜೂರಾದರೂ, ಇಂದು ಬಿಡುಗಡೆಯಾಗಲು ಸಾಧ್ಯವಿಲ್ಲ. ಕೋರ್ಟ್ ಸಮಯ ಮೀರಿದ್ದರಿಂದ, ನ್ಯಾಯಾಲಯದ ಪ್ರಕ್ರಿಯೆ ಮತ್ತು ಜೈಲಿನಲ್ಲಿನ ಬಿಡುಗಡೆ ಪ್ರಕ್ರಿಯೆಗಳು ತಡವಾಗುವ ಕಾರಣದಿಂದ ನಾಳೆಯೇ ಅವರನ್ನು ರಿಲೀಸ್ ಮಾಡಲಾಗುತ್ತದೆ. ಈ ನಡುವೆ ಜೆಡಿಎಸ್ ಕಾರ್ಯಕರ್ತರು ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದನ್ನು ಸಂಭ್ರಮಿಸಿದರು.