ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣ ಸಂಬಂಧ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮದ ಜೊತೆಗೆ ಸಂತ್ರಸ್ತೆಯರಿಗೆ ಸಾಧ್ಯವಾದ ಎಲ್ಲ ರೀತಿಯ ಸಹಕಾರ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿ ಹಲವು ವರ್ಷಗಳಿಂದ ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಸಹೋದರಿಯರು, ತಾಯಿಯಂದಿರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಶಿಕ್ಷೆಯಾಗಬೇಕು. ಹೊಳೆನರಸೀಪುರದ ಬಿಜೆಪಿ ಮುಖಂಡ ಹಾಗೂ ವಕೀಲ ದೇವೇರಾಜೇಗೌಡ ಈ ಪ್ರಕರಣದ ಸಂಬಂಧ ಕಳೆದ 2023ನೇ ವರ್ಷದ ಡಿಸೆಂಬರ್ ತಿಂಗಳಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಾಹಿತಿ ನೀಡಿದ್ದರು. ಜೊತೆಗೆ ಆರೋಪಿಯ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದರು. ಆದರೂ ಪ್ರಧಾನಿ ಮೋದಿ ಅವರು ಆರೋಪಿ ಪರ ಪ್ರಚಾರ ನಡೆಸಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ವಿದೇಶಕ್ಕೆ ಹೋಗಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಆರೋಪಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಶೀರ್ವಾದ ಹೊಂದಿದ್ದು, ಇದನ್ನು ತೀವ್ರವಾಗಿ ಖಂಡಿಸಬೇಕು. ನನ್ನ 2 ದಶಕಗಳ ಸಾರ್ವಜನಿಕ ಜೀವನದಲ್ಲಿ ಹಿರಿಯ ಜನಪ್ರತಿನಿಧಿಯೊಬ್ಬರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವಾದರೂ ಸುಮ್ಮನಿರುವುದನ್ನು ನಾನು ನೋಡಿಲ್ಲ. ಹರಿಯಾಣದ ಕುಸ್ತಿಪಟುಗಳಿಂದ ಹಿಡಿದು ಮಣಿಪುರದ ನಮ್ಮ ಸಹೋದರಿಯರವರೆಗೆ ಪ್ರಧಾನಿ ಮೋದಿ ಕ್ರಿಮಿನಲ್ಗಳ ಬೆನ್ನಿಗೆ ನಿಂತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ನಮ್ಮ ಸಹೋದರಿಯರು, ತಾಯಂದಿರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದಾಗಿದೆ. ಪ್ರಕರಣ ಸಂಬಂಧ ತನಿಖೆಗಾಗಿ ಎಸ್ಐಟಿ ರಚನೆ ಮಾಡಲಾಗಿದೆ. ಜೊತೆಗೆ ಆರೋಪಿಯ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿ ಮತ್ತು ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಪ್ರಧಾನಿಗೆ ನೀವು ಪತ್ರ ಬರೆದಿರುವ ಬಗ್ಗೆ ನನಗೆ ತಿಳಿದಿದೆ. ಈ ಹೀನ ಕೃತ್ಯ ಎಸಗಿದ ಆರೋಪಿ ಮೇಲೆ ಕಠಿಣ ಕ್ರಮ ವಹಿಸಿ ಎಂದು ಪತ್ರದಲ್ಲಿ ಕೋರಿದ್ದಾರೆ.
ರಾಹುಲ್ ಪತ್ರಕ್ಕೆ ಸಿಎಂ ಪ್ರತಿಕ್ರಿಯೆ: ‘ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ಜೊತೆಗೆ ನ್ಯಾಯದ ಹೋರಾಟದಲ್ಲಿ ಸರ್ಕಾರ ಜೊತೆ ನಿಲ್ಲಲಿದೆ ಎಂಬ ವಾಗ್ದಾನ ನೀಡುತ್ತಿದ್ದೇನೆ’ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.