ನವದೆಹಲಿ: ಕರ್ನಾಟಕ, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದ ನಡೆಸುವ ಗುಡುಗು, ಸಿಡಿಲು, ಮಿಂಚು ಸಹಿತ ಮಳೆಯಾಗುತ್ತಿದೆ. ಭಾರತದ ಹವಾಮಾನ ಇಲಾಖೆ ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಮೇ 22ರವರೆಗೆ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ.
ಮುಂದಿನ 7 ದಿನಗಳ ಕಾಲ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ, ಲಕ್ಷದ್ವೀಪ ಮತ್ತು ದಕ್ಷಿಣ ಕರ್ನಾಟಕದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಆಂಧ್ರಪ್ರದೇಶ, ಯಾನಂ, ತೆಲಂಗಾಣ ಮತ್ತು ರಾಯಲಸೀಮಾದಲ್ಲಿ ಕೂಡ ಈ ಅವಧಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ ಮತ್ತು ದಕ್ಷಿಣ ಕರ್ನಾಟಕದಲ್ಲಿ ಇಂದಿನಿಂದ ಮೇ 20ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮೇ 20ರಂದು ತಮಿಳುನಾಡಿನಲ್ಲಿ ಮತ್ತು ಕೇರಳದಲ್ಲಿ ಭಾರಿ ಮಳೆಯಾಗಬಹುದು. ಇಂದು(ಗುರುವಾರ) ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಒಡಿಶಾ ಮತ್ತು ಗುಜರಾತ್‌ನಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಲಘು ಮಳೆಯ ಮುನ್ಸೂಚನೆ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇನ್ನು 7 ದಿನ ಚದುರಿದಂತೆ ಸಾಕಷ್ಟು ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ವಾರದಲ್ಲಿ ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಮೇ 19ರಿಂದ ಮೇ 22ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮುಂದಿನ 7 ದಿನಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಬಹುದು.
ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದರೆ, ದೇಶದ ಇತರ ಭಾಗಗಳು ಸುಡುವ ಶಾಖವನ್ನು ಅನುಭವಿಸುತ್ತವೆ. ಮೇ 17ರಿಂದ 20 ರವರೆಗೆ ಪಶ್ಚಿಮ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ತೀವ್ರವಾದ ಉಷ್ಣ ಅಲೆಗಳ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಪೂರ್ವ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರ ಮಧ್ಯಪ್ರದೇಶದಲ್ಲಿ ಮೇ 20ರವರೆಗೆ ಶಾಖದ ಅಲೆ ಇರುತ್ತವೆ.