ಲಖನೌ: “ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಲಖನೌನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;
“ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ ಜೋಡೋ ಯಾತ್ರೆ ಮೂಲಕ ನಿರುದ್ಯೋಗ ಹಾಗೂ ಬೆಲೆ ಏರಿಕೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದು ಅರಿತರು. ಈ ಸಮಸ್ಯೆಗಳಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆರವಾಗಬೇಕು ಎಂದು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು.
ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿದೆವು. ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದೇವೆ. ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ ಘೋಷಿಸಿದೆವು.
ಕರ್ನಾಟಕದಲ್ಲಿ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಮೂಲಕ 2 ಸಾವಿರ ಹಣ ಪಡೆಯುತ್ತಿದ್ದಾರೆ. 1.50 ಕೋಟಿ ಮನೆಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾಯಿತು. ತೆಲಂಗಾಣ ಚುನಾವಣೆದಲ್ಲೂ 6 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಆ ಪೈಕಿ ಬಹುತೇಕ ಜಾರಿಯಾಗಿವೆ. ಕೆಲವು ಜಾರಿ ಪ್ರಕ್ರಿಯೆಯಲ್ಲಿವೆ.
ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ: ಬಿಜೆಪಿ 10 ವರ್ಷಗಳ ಹಿಂದೆ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಕರ್ನಾಟಕದಲ್ಲಿ 6.5 ಕೋಟಿ ಜನಸಂಖ್ಯೆ ಇದ್ದು, ನಮ್ಮ ರಾಜ್ಯದ ಬಜೆಟ್ ಗಾತ್ರ 3.80 ಲಕ್ಷ ಕೋಟಿ ಇದೆ. ಆ ಪೈಕಿ 52 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ಮೀಸಲಿಟ್ಟಿದ್ದೇವೆ. ಇನ್ನು 1.20 ಲಕ್ಷ ಕೋಟಿಯಷ್ಟು ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ.
ಬಿಜೆಪಿ ಕೇವಲ ಭಾವನಾತ್ಮಕ ರಾಜಕೀಯ ಮಾಡುತ್ತಿದೆ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜನಸಾಮಾನ್ಯರ ಹಸಿವು ನೀಗಿಸಲು, ಅವರ ಸಂಕಷ್ಟಗಳಿಗೆ ಪರಿಹಾರ ನೀಡಲು ಇಂತಹ ಒಂದೇ ಒಂದು ಯೋಜನೆ ನೀಡಿದ್ದೀರಾ ಎಂದು ಪ್ರಧಾನಮಂತ್ರಿಗಳು, ಅವರ ಪಕ್ಷದ ನಾಯಕರು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಕೇಳಬಯಸುತ್ತೇನೆ.
ಯುಪಿಎ ಅವಧಿಯಲ್ಲಿ ಹಸಿವು ನೀಗಿಸಲು ಆಹಾರ ಭದ್ರತಾ ಕಾಯ್ದೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ನರೇಗಾ, ಎಲ್ಲರಿಗೂ ಶಿಕ್ಷಣ ಸಿಗಲು ಶೈಕ್ಷಣಿಕ ಹಕ್ಕು, ಮಾಹಿತಿ ಹಕ್ಕು ಜಾರಿ ಮಾಡಲಾಗಿತ್ತು. ಇಂತಹ ಯಾವುದಾದರೂ ಒಂದು ಯೋಜನೆಯನ್ನು ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಕೊಟ್ಟಿದೆಯೇ? ಅದು ಒಂದು ಯೋಜನೆ ನೀಡಿದ್ದರೂ ನಾವು ಜನರ ಮುಂದೆ ಹೋಗಿ ಮತ ಕೇಳುವ ಪ್ರಮೇಯವೇ ಇರುತ್ತಿರಲಿಲ್ಲ. ಜನರ ಕಷ್ಟಗಳಿಗೆ ಪರಿಹಾರ ನೀಡಲು ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಜಾರಿಯಾಗಲಿವೆ: ಕಾಂಗ್ರೆಸ್ ಐದು ನ್ಯಾಯ ಯೋಜನೆಗಳ ಮೂಲಕ ಒಟ್ಟಾರೆ 25 ಗ್ಯಾರಂಟಿಗಳನ್ನು ಪ್ರಕಟಿಸಿದ್ದು, ಮಹಾಲಕ್ಷ್ಮಿ ಯೋಜನೆ ಮೂಲಕ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ ಒಂದು ಲಕ್ಷ ಶಿಷ್ಯ ವೇತನ ಹಾಗೂ ತರಬೇತಿ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದಂತೆ ಕನಿಷ್ಠ ಬೆಂಬಲ ಬೆಲೆ, ನರೇಗಾ ಕೂಲಿ 400 ರೂ.ಗೆ ಏರಿಕೆ, ನಗರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ, 25 ಲಕ್ಷ ವರೆಗಿನ ಆರೋಗ್ಯ ವಿಮೆ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.