ಬೆಂಗಳೂರು: ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಹೇಳಿಕೆ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಮತ್ತು ಸಂಕಷ್ಟಕ್ಕೆ ಸಿಲುಕಿಸಿದೆ.
ಕುಮಾರಸ್ವಾಮಿ ಮತ್ತು ಬೆಳಗಾವಿ ಬಿಜೆಪಿ ಧುರೀಣ ಸಂಜಯ ಪಾಟೀಲ್ ಅವರಿಗೆ ರಾಜ್ಯ ಮಹಿಳಾ ಆಯೋಗ ನೋಟೀಸ್ ಜಾರಿ ಮಾಡಿದ್ದು ಒಂದು ವಾರದೊಳಗೆ ಅವರು ಆಯೋಗದ ಎದುರು ಹಾಜರಾಗಿ ಸಮಜಾಯಿಷಿ ನೀಡಬೇಕಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಕುಮಾರಸ್ವಾಮಿ ಒಬ್ಬ ಹಿರಿಯ ರಾಜಕಾರಣಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಮಹಿಳೆಯರು ಬಗ್ಗೆ ಬಹಳ ಕೀಳುಸ್ತರದಲ್ಲಿ ಮಾತಾಡಿದ್ದಾರೆ, ತಮ್ಮ ರಾಜಕೀಯ ಲಾಭಕ್ಕೆ ಅವರ ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಮಾತಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ನೀಡಲ್ಲ, ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಮತ್ತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪ್ರಕರಣ ದಾಖಲಿಸಿಕೊಂಡು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಹಾಗೆಯೇ, ಅಕ್ಕ ಒಂದು ಮಾತ್ರೆ ಮತ್ತು ಪೆಗ್ ತಗೊಂಡು ಮಲ್ಕೊಂಬಿಡ್ತಾರೆ ಅಂತ ಹೇಳಿರುವ ಸಂಜಯ ಪಾಟೀಲ್ ಗೂ ನೋಟೀಸ್ ಜಾರಿಮಾಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.