ಅಂಕಣ ರಾಜಕೀಯ ಸುದ್ದಿ

ಲಾಸ್ಟ್ ಸಲ ಸುಮಕ್ಕುಂಗೂ ಹಿಂಗೆ ಮಾತಾಡಿ, ಅಣ್ಣ ಮಣ್ಣು ಮುಕ್ತು,

Share It


ಏನ್ಲಾ ಹುಡ್ಗ, ಎತ್ತಾಗೋಗಿದ್ಯೋ ಈಸ್ ದಿನ, ಬೆಂಗಳೂರಲ್ಲೇನೋ ಧಬಾಕ್ತೀನಿ ಅಂತ ಹೋಗಿದ್ಯಂತೆ, ಏನ್ಲಾ ಸೀನಾ ಹಿಂಗ್ ವಾಪಸ್ ಬಂದ್ಬುಟ್ಟೆ ಅಂತ ಹಳ್ಳಿ ಕಟ್ಟೆಮುಂದ್ ಕೂತ್ಕೋಂಡು, ಉದಯರಂಗ ಬಸ್ ಇಳ್ಕಂಡ್, ಬ್ಯಾಗ್ ಇಡ್ಕಂಡ್ ಬತ್ತಿದ್ದ ಸೀನಂಗೆ ಕೊಶ್ಚನ್ ಮಾಡ್ದ ಪಟೇಲಪ್ಪ.

ಬೆಂಗ್ಳೂರ್ ಹೋಗಿದ್ದೆ ಕಣ್ ದೊಡ್ಡಪ್ಪ, ಈಗ ಎಲೆಕ್ಸನ್ ಅಲ್ವೇ, ಅದ್ಕೆ ವಾಪಸ್ ನಮ್ಮೂರಿಗ್ ನಾನ್ ಬತ್ತೀದ್ದೀನಿ, ಇಲ್ಲಿ ಕ್ಯಾನ್ವಸ್ ಹೋದ್ರೆ, ಹೊಟ್ಟೆ ತುಂಬಾ ಬಿರಿಯಾನಿ, ಖಚರ್ಿಗ್ ದುಡ್ಡು ಕೊಡಲ್ವೇ, ಅದ್ಕೆ ಬೆಂಗಳೂರ್ ಬುಟ್ಟು ಬಂದ್ ಬುಟ್ಟೆ ಕಣಾ ಅಂತ ದೊಡ್ಡಪ್ಪಂಗೆ ಟಾಂಗ್ ಕೊಟ್ಟ ಗುಡ್ದಳ್ಳಿ ಸೀನ.

ಊ ಕಣ್ ಬುಡ್ಲಾ, ನಂಗೂ ಊರಲ್ಲೇ, ಯಾವ್ ಮುಂಡೆ ಮಗುನ್ ಕೈಲಿ ಮಾತಾಡದು ಅಂತ ಬೇಜಾರಾಗೋಗ್ಯಿತ್ತು, ಕಂಪನಿಗೆ ನೀನ್ ಬಂದಂಗಾಯ್ತು, ನಾಲ್ಗೆ ಎಲ್ಲ ಎಕ್ಕಡ ಆಗ್ಯೋಗಿತ್ತು ಕಣ್ಲಾ, ಮಾತಾಡಕ್ಕೆ ಜನ ಸಿಗ್ದೇನೆ ಅಂತ ತನ್ನ ಗೋಳಾಟವನ್ನು ಹೇಳಿಕೊಂಡ ಪಟೇಲಪ್ಪ.

ಬುಡು, ದೊಡ್ಡಪ್ಪ, ನಾನಿರುವುದೇ ನಿನಗಾಗಿ, ನಿಂಗೇನ್ ಮ್ಯಾಟ್ರು ಬೇಕು ಕೇಳು, ನಾ ಹೇಳ್ತೀನಿ, ಬೆಂಗಳೂರ್ ಗಲ್ಲಿ ಗಲ್ಲಿ ಸುತ್ತಿ, ಗಂಡುಗಲಿ ಕುಮಾರನ್ ತರ ಫುಲ್ ಸ್ಟಡಿ ಆಗ್ ಬಂದಿದ್ದೀನಿ, ನಮ್ ಲೀಡ್ರುಗಳೆಲ್ಲ ಎಲ್ ಉಣ್ತಾರೆ ಅನ್ನೋದ್ರಿಂದ ಹಿಡ್ದು, ಅವ್ರು ಎಲ್ಲಿ ಮಲ್ಕತ್ತಾರೆ ಅನ್ನೋ ಗಂಟ ನಂಗೆಲ್ಲ ಗೊತ್ತಾಗ್ಯದೆ ಕಣ ಅಂದ ಸೀನ.

ಹೌದ್ಲಾ, ಹಂಗಾದ್ರೆ ಏನ್ಲಾ ಕೆಲ್ಸ ಮಾಡ್ತಿದ್ದೆ, ನೀನು? ಹೆಂಗ್ ನಡೇತೈತೆ ಬೆಂಗಳೂರ್ನಾಗೆ ಎಲೆಕ್ಸನ್ನು, ಈ ಸಲ ಯಾರ್ ಗೆಲ್ತಾರೆ., ಯಾರ್ ಸೋಲ್ತಾರೆ? ಅಂತ ಹೇಳ್ತಾರಲ್ಲಾ ಬೆಂಗಳೂರ್ ಜನ ಅಂತ ಕೊಶ್ಚನ್ ಮಾಡ್ದ ಪಟೇಲಪ್ಪ

ದೊಡ್ಡಪ್ಪ, ಬೆಂಗಳೂರ್ ಜನಕ್ಕೆ ಏನ್ ಗೊತ್ತಾಯ್ತದೆ ದೊಡ್ಡಪ್ಪ, ಅವ್ರು ಎದ್ದ ಬಂದ್ ವೋಟ್ ಹಾಕ್ರೋ ಅಂದ್ರೇನೆ, ಎಲೆಕ್ಸನ್ ಬಂದ್ರೆ ಸಾಕು ಗೋವಾ ಕಡೆಗ್ ಟ್ರಿಪ್ ಹೋಯ್ತವೆ, ರಾಜ್ಕೀಯ ಇರದೆ ಹಳ್ಳಿ ಕಡೆ ಕಣ್ ದೊಡ್ಡಪ್ಪೋ ಅಂದ ಸೀನ.

ಹಂಗಂತಿಯಾ ಸೀನ, ಹಂಗಾದ್ರೆ ಯಾವ್ಯಾವ್ ಲೀಡ್ರು ಕತೆ ಏನೇಳು, ಈ ಎಲೆಕ್ಸನ್ನಲ್ಲಿ ಮೋದಿ 400 ಗೆಲ್ತಾರೋ, ರಾಹುಲ್ ಗಾಂಧಿ ಅಧಿಕಾರ ಹಿಡ್ಕತ್ತಾರೋ, ಏನನ್ನುತ್ತೆ ಜನ್ರ ನಾಡಿ ಮಿಡ್ತಾ ಅಂತ ಪ್ರಶ್ನೆ ಮಾಡ್ದ ಪಟೇಲಪ್ಪ.

ದೊಡ್ಡಪ್ಪ, 400 ಹೊಡೆಯೋದು ಈಜಿ ಇಲ್ಲ, ರಾಹುಲ್ ಗಾಂಧಿಗೂ ಸುಲ್ಬ ಇಲ್ಲ, ಇನ್ನು ಇಲ್ಲಿ ನಿಂತಿರೋ ಎಲ್ಲ ಲೀಡ್ರುಗೋಳು, ಬೆವ್ರು, ರಕ್ತ ಎಲ್ಲ ಹರಿಸ್ತಿದ್ದಾರೆ. ಬೆವರು ಬರೋದ್ ಮಾತ್ರ ಕಾಣ್ತಿದೆ. ರಕ್ತ ಅಂದ್ರೆ, ಹೀಟಿಗೆ ಬೆಳಗ್ಗೆ ಬಾತ್ ರೂಮಲ್ಲಿ ಕಿತ್ಕೋತ್ತೈತಲ್ಲ ಅದು ಕಣ್ ತಕಾ ಅಂದ ಸೀನ.

ಅಲ್ ಕಣ್ಲಾ ದೊಡ್ಡ್ ಗೌಡ್ರು ಅಳಿಯಾ ನಿಂತ್ಕಂಡಲ್ಲ, ಹೆಂಗಪ್ಪ ಅವಯ್ಯನ್ ಕತೆ, ದೊಡ್ಡಗೌಡ್ರು ಬ್ಯಾರೆ ಮೋದಿನಾ ಹೊಗ್ಳಿ, ಸಿದ್ದರಾಮಯ್ಯನ ಉಗ್ದು ಉಪ್ಪಾಕ್ಯದಂತೆ ಅಂದ ಪಟೇಲಪ್ಪ

ದೊಡ್ಡಪ್ಪ, ಮೋದಿ ದೊಡ್ಡೋರೆ ಇರ್ಬೋದು, ಆದ್ರೆ, ಆರು ಕೋಟಿ ಜನದ ಪ್ರತಿನಿಧಿ ಅಂದ್ಮೇಲೆ ಸಿದ್ದರಾಮಣ್ಣನೂ ದೊಡ್ಡೋರೆ ಅಲ್ವಾ, ಗೌಡ್ರಿಗೆ ಇದ್ರ ಬಗ್ಗೆ ಒಂಚೂರ್ ಗೊತ್ತಿದ್ರೆ ಒಳ್ಳೇದಿತ್ತಲ್ವಾ? ಮೋದಿ ಹೊಗಳೋಕ್ ಹೋಗಿ ರಾಜ್ಯದ್ ಜನರ ಅವಮಾನ ಮಾಡೋದ್ ಸರಿನಾ ಅನ್ನೋದು ಕಾಂಗ್ರೆಸ್ ಪ್ರಶ್ನೆ ಅಂದ ಸೀನ.

ಅದ್ಸರಿ, ಕುಮಾರಣ್ಣ ಏನ್ಲಾ ಹೆಣ್ಮಕ್ಕಳನ್ನ ಬೈದತ್ತಂತಲ್ಲಾ, ಅದ್ಯಾಕಿಂಗೆ ಹೆಣ್ಮಕ್ಕ ಇಸ್ಯಾ ಮಾತಾಡಿ ಥೂ ಅನ್ನಿಸ್ಕತ್ತದೆ ಈ ಕುಮಾರಣ್ಣ,? ಇದೆಲ್ಲ ಬೇಕಿತ್ತಾ ಅವಯ್ಯಂಗೆ ಅಂದ ಪಟೇಲಪ್ಪ.

ಈ ಕನ್ ದೊಡ್ಡಪ್ಪ, ಕಾಂಗ್ರೆಸ್ ಕೊಟ್ಟಿರೋ ಗ್ಯಾರಂಟಿನಾ ಟೀಕೆ ಮಾಡೋಕ್ ಹೋಗಿ, ಗ್ಯಾರಂಟಿಯಿಂದ ಹೆಣ್ಮಕ್ಕಳೆಲ್ಲ ಹಾಳಾಗೋಗ್ತಿದ್ದಾರೆ ಅಂದ್ಬುಟ್ಟದೆ, ಅದನ್ನೆ ಇಡ್ಕಂಡು ಕಾಂಗ್ರೆಸ್ನೋರು ಕುಮಾರಣ್ಣನ್ನಾ ಟೀಕೆ ಮಾಡಿದ್ದೇ ಮಾಡಿದ್ದು, ಕುಮಾರಣ್ಣ ಸ್ತ್ರಿವಿರೋಧಿ ಅಂತ ಬಿಂಬಿಸಿ, ಲಾಸ್ಟ್ ಸಲ ಸುಮಕ್ಕುಂಗೂ ಹಿಂಗೆ ಮಾತಾಡಿ, ಅಣ್ಣ ಮಣ್ಣು ಮುಕ್ತು, ಈಗ್ಲೂ ಹಂಗೆ ಮಾಡ್ಬುಡನಾ ಅಂತ ಫ್ಲಾನ್ ಮಾಡ್ತಾವ್ರೆ, ದೊಡ್ಡಪ್ಪ, ತಡೀ ವಸಿಯಾ ಆಮೇಲ್ ಮಾತಾಡನಾ, ನಾನ್ ಮನೆಗೋಗಿ ಬ್ಯಾಗ್ ಮಡ್ಗಿ, ಸಂಜಿಕ್ ಬತ್ತೀನಿ ಅಂತ ಮನೆ ಕಡೆಗೆ ಹೊಂಟ, ಸೀನ, ಒಂದ್ ಅರ್ಧ ಟೀ ಹಾಕ್ ಸುಬ್ಬಿ ಅಂತ ತಟ್ಟಿ ಹೋಟ್ಲು ಕಡೀಕ್ ಹೊಂಟ ಪಟೇಲಪ್ಪ.


Share It

You cannot copy content of this page