ಫೋನ್ ಟ್ಯಾಪ್ ಮಾಡುವುದು ಅಕ್ರಮ, ಅಂತಹವರನ್ನು ಜೈಲಿಗೆ ಕಳುಹಿಸಬೇಕು
ಬೆಂಗಳೂರು: ಫೋನ್ ಕದ್ದಾಲಿಕೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ. ಇದು ಸುಳ್ಳು ಎಂದಾದರೆ ಕೂಡಲೇ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಫೋನ್ ಟ್ಯಾಪಿಂಗ್ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಪೊಲೀಸ್ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರಿಂದ ತಿಳಿದುಕೊಂಡು ಹೇಳಿರಬಹುದು.
ಫೋನ್ ಟ್ಯಾಪ್ ಮಾಡುವುದು ಅಕ್ರಮ, ಹಣ ಕೊಟ್ಟರೆ ಚೀನಾದಿಂದ ಉಪಕರಣ ಸಿಗುತ್ತದೆ. ರಾಜ್ಯಕ್ಕೆ ಇಂತಹ ಉಪಕರಣ ಎಷ್ಟು ಬಂದಿದೆ, ಎಲ್ಲೆಲ್ಲಿದೆ ಎಂದು ಪತ್ತೆ ಮಾಡಬೇಕು. ವಿಪಕ್ಷ ನಾಯಕರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಫೋನ್ ಟ್ಯಾಪ್ ಮಾಡುವವರನ್ನು ಜೈಲಿಗೆ ಕಳುಹಿಸಬೇಕು. ಹಿಂದೆಯೂ ಈ ರೀತಿ ಪೊಲೀಸ್ ಅಧಿಕಾರಿಗಳು ಮಾಡಿ ತನಿಖೆಗೆ ಒಳಗಾಗಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳುವುದಾದರೆ ತನಿಖೆಗೆ ನೀಡಲಿ. ತಾರ್ಕಿಕ ಅಂತ್ಯ ಮುಟ್ಟಿಸಲಿ ಎಂದು ಒತ್ತಾಯಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕುರಿತು ಚರ್ಚಿಸಲಾಗಿದೆ. ಮತದಾರರ ಮನ ಒಲಿಸುವ ಕೆಲಸ ಮಾಡಬೇಕೆಂದು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿ, ಪ್ರತಿ ಬೂತ್‌ಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಟಿಕೆಟ್ ಕುರಿತು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.