ಉಪಯುಕ್ತ ಸುದ್ದಿ

ಕರಗ ಉತ್ಸವ ಹಿನ್ನೆಲೆ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು-ನಾಳೆ ಮದ್ಯ ಅಲಭ್ಯ

Share It

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿಯಿಂದ ನಡೆಯಲಿರುವ ಕರಗ ಉತ್ಸವದ ಮೆರವಣಿಗೆ ನಿಮಿತ್ತ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಏಪ್ರಿಲ್ 23 ರಂದು ಸಂಜೆ 4 ರಿಂದ ಏಪ್ರಿಲ್ 24 ರ ಬೆಳಿಗ್ಗೆ 10 ರವರೆಗೆ ಮದ್ಯ ಮಾರಾಟ ನಿರ್ಬಂಧ ಜಾರಿಯಲ್ಲಿರುತ್ತವೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬಾರ್‌ಗಳು, ವೈನ್ ಸ್ಟೋರ್‌ಗಳು, ಪಬ್‌ಗಳು ಮತ್ತು ಮದ್ಯ ಮಾರಾಟ ಮಾಡುವ ಇತರ ಸ್ಥಳಗಳಲ್ಲಿ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ಸಿಟಿ ಮಾರ್ಕೆಟ್, ಕಲಾಸಿಪಾಳ್ಯ, ಕಾಟನ್‌ಪೇಟೆ ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ನಿರ್ಬಂಧ ಜಾರಿಯಲ್ಲಿರಲಿದೆ. ಸಿಎಲ್ -4 (ಕ್ಲಬ್‌ಗಳು) ಮತ್ತು ಸಿಎಲ್ -6 ಎ ಪರವಾನಗಿಗಳನ್ನು ಹೊಂದಿರುವ ಸ್ಟಾರ್ ಹೋಟೆಲ್​ಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವದ ಮೆರವಣಿಗೆ ಇಂದು ರಾತ್ರಿಯಿಂದ ಆರಂಭವಾಗಲಿದೆ. ಇಂದು ಮಂಗಳವಾರ ಮಧ್ಯರಾತ್ರಿ 2 ಗಂಟೆಯಿಂದ ನಾಳೆ ಬುಧವಾರ ಬೆಳಗ್ಗೆ 10 ಗಂಟೆಯವರೆಗೂ ಕರಗ ಮಹೋತ್ಸವದ ಮೆರವಣಿಗೆ ಸಾಗಲಿದೆ. ಅದ್ಧೂರಿಯಾಗಿ ಕರಗ ಆಚರಣೆಗೆ ಕರಗ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಗ್ಗೆಯಿಂದ ಕರಗದ ಶಾಸ್ತ್ರಗಳು ಆರಂಭವಾಗಿ ಮಧ್ಯರಾತ್ರಿವರೆಗೂ ನಡೆಯಲಿದ್ದು, ಶಾಸ್ತ್ರಗಳು ಮುಗಿದ ನಂತರ ಮಧ್ಯರಾತ್ರಿ 2 ಗಂಟೆಗೆ ಅಧಿಕೃತವಾಗಿ ಕರಗ ಶಕ್ತ್ಯೋತ್ಸವ ಆರಂಭವಾಗಲಿದೆ.

ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಲಿದೆ. ನಂತರ ಕೆಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ಆಗಮಿಸಲಿದೆ. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಗಲಿದೆ. ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್ ಪೇಟೆ ಮೂಲಕ ನಾಳೆ ಬೆಳಗ್ಗೆ 6 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಲಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.


Share It

You cannot copy content of this page