ಬೆಂಗಳೂರು: ಕೆಎಂಸಿಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆಯಾಗಿದ್ದರೂ, ಹಳೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೇ ಅಧಿಕಾರ ಚಲಾಯಿಸುತ್ತಿರುವ ಸಂಬAಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೊಟೀಸ್ ನೀಡಿದೆ.
ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ಪದಾಧಿಕಾರಿಗಳ ಹುದ್ದೆಗೆ ಹೊಸದಾಗಿ ಚುನಾವಣೆ ನಡೆದು ೧೨ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ, ಹಿಂದಿನ ಪದಾಧಿಕಾರಿಗಳಲ್ಲಿ ಇಬ್ಬರು ಅನಧಿಕೃತವಾಗಿ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಕೆಎಂಸಿಗೆ ಐವರು ಸದಸ್ಯರ ನಾಮನಿರ್ದೇಶನ ಮಾಡುವಲ್ಲಿ ವಿಫಲವಾಗಿದೆ ಎಂದು ಮಂಗಳೂರಿನ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ಎಂಬುವರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ. ಕೆಎಂಸಿ ಕಾಯಿದೆ ಅನ್ವಯ ನಾಮನಿರ್ದೇಶನ ಪ್ರಕ್ರಿಯೆ ಮಾಡದ ಕಾರಣಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿಲ್ಲ. ಹೀಗಾಗಿ, ಹಿಂದಿನ ಪದಾಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ಕೆಎಂಸಿ ಪದಾಧಿಕಾರಿಗಳ ಹುದ್ದೆಗೆ 2020 ರ ಜನವರಿ 23 ರಂದು ಚುನಾವಣೆ ನಡೆದಿತ್ತು. ನಂತರ ಚುನಾವಣೆ ಸಿಂಧುತ್ವ ಸಂಬAಧ ನ್ಯಾಯಾಲಯದಲ್ಲಿ ಸುದೀರ್ಘ ಕಾನೂನು ಸಮರದ ನಂತರ 12 ಹೊಸ ಪದಾಧಿಕಾರಿಗಳು 2022 ರ ನವೆಂಬರ್ 27 ರಂದು ಅಧಿಕಾರ ಸ್ವೀಕರಿಸಿದರು. ಸರ್ಕಾರ ಕೆಎಂಸಿ ಕಾಯಿದೆ ಸೆಕ್ಷನ್ 3(2) (ಸಿ) ಅನ್ವಯ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡದ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆದಿರಲಿಲ್ಲ.
ಹೊಸದಾಗಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಹಿಂದೆ 2011 ರಲ್ಲಿ ಆಯ್ಕೆಯಾಗಿದ್ದ ಸದಸ್ಯರಾದ ವಿ.ಕಾಂಚಿಪ್ರಸಾದ್ ಮತ್ತು ನಾಗರಾಜ್ ಅಣ್ಣೇಗೌಡ ಅವರು ಅನಧಿಕೃತವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಅವರಿಗೆ ಆ ಸ್ಥಾನಗಳಿಂದ ತಕ್ಷಣವೇ ಕೆಳಗಿಳಿಯುವಂತೆ ನಿರ್ದೇಶನ ನೀಡಬೇಕು, ಸರ್ಕಾರಕ್ಕೆ ಆದಷ್ಟು ಶೀಘ್ರ 5 ಸದಸ್ಯರ ನಾಮನಿರ್ದೇಶನ ಮಾಡುವಂತೆ ಸೂಚಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.