ಸುದ್ದಿ

ಮುಡಾ ಸೈಟ್ ಹಂಚಿಕೆ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

Share It

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಪರ್ಯಾಯ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಎನ್.ಆರ್​. ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲೆ ಸಮೇತ ಲೋಕಾಯುಕ್ತಕ್ಕೆ ಶನಿವಾರ ದೂರು ನೀಡಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರು ಹಣಕಾಸು ಸಚಿವ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದ ವೇಳೆ ಭೂಹಗರಣ ಮತ್ತು ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಎನ್.ಆರ್​. ರಮೇಶ್ ಅವರು 400ಕ್ಕೂ ಹೆಚ್ಚು ಪುಟಗಳ ದಾಖಲೆಗಳ ಸಮೇತ ದೂರು ನೀಡಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಮುಡಾ ಸೈಟ್​ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪಗಳು ಕೇಳಿಬಂದಿದ್ದು, ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಪ್ರತಿಪಕ್ಷಗಳು ಸದನದ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ನಡೆಸುತ್ತಿವೆ. ಇದೀಗ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದೆ.

ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಆರ್ ರಮೇಶ್, 1997-98ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ. ಎಚ್​ ಪಟೇಲ್​ ಅವರ ಸರ್ಕಾರದಲ್ಲಿ ಹಣಕಾಸು ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸ್ವಾಧೀನಪಡಿಸಿಕೊಂಡ ದೇವನೂರು 3ನೇ ಬಡಾವಣೆಯನ್ನು ಮುಡಾ ಕೈ ಬಿಡುವಂತೆ ಅಧಿಸೂಚನೆ ಹೊರಡಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ.

ಅಲ್ಲದೆ 2004-05ರಲ್ಲಿ ಧರ್ಮಸಿಂಗ್ ಅವರ ಸರ್ಕಾರದಲ್ಲೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಇದೇ ಭೂಮಿಯನ್ನು ಮೃತ ವ್ಯಕ್ತಿಯ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿಸಿದ್ದರು ಎಂದು ಆರೋಪಿಸಿದರು.

ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮೈಸೂರಿನ ವಿಜಯನಗರದ 2 ಮತ್ತು 3 ಬಡಾವಣೆಯಲ್ಲಿ ಸುಮಾರು 39 ಸಾವಿರ ಚದರ ಅಡಿ​ನ 14 ನಿವೇಶನಗಳನ್ನು ಬದಲಿ ನಿವೇಶನ ಹೆಸರಿನಲ್ಲಿ ತಮ್ಮ ಹೆಸರಿಗೆ ಮಾಡುವಂತೆ ಮುಡಾ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುತ್ತಾರೆ ಎಂದು ಎನ್.ಆರ್ ರಮೇಶ್ ತಿಳಿಸಿದರು.

ನಂತರ 2022ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಮಯದಲ್ಲಿ ಈ 14 ನಿವೇಶನಗಳನ್ನು ತಮ್ಮ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ದೇವನೂರು ಬಡವಾಣೆಯಲ್ಲಿ ಒಂದು ನಿವೇಶನ ಬೆಲೆ 5ರಿಂದ 6 ಕೋಟಿ ರೂ. ಇದ್ದರೆ, ವಿಜಯನಗರದಲ್ಲಿನ 14 ಬಡಾವಣೆಗಳ ಬೆಲೆ ಸುಮಾರು 50ರಿಂದ 60 ಕೋಟಿ ರೂ. ಇದೆ.

ಒಟ್ಟಿನಲ್ಲಿ ಪ್ರಭಾವಿ ಹುದ್ದೆಯಲ್ಲಿರುವಾಗಲೇ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಹಗರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಹಾಗೂ ಆ ಸಮಯದಲ್ಲಿ ಮೂಡಾದಲ್ಲಿದ್ದ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ದೂರುದಾರ ಎನ್‌.ಆರ್.ರಮೇಶ್ ತಿಳಿಸಿದರು.


Share It

You cannot copy content of this page