ಬೆಂಗಳೂರು: ತಮ್ಮ ಪುತ್ರನಿಗೆ ಟಿಕೆಟ್ ಸಿಗದಿದ್ದರಿಂದ ಬಂಡೆದ್ದಿರುವ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ನಾಳೆ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಳೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಈಶ್ವರಪ್ಪ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಖುದ್ದು ಅವರೇ ಘೋಷಣೆ ಮಾಡಿದ್ದಾರೆ.
ಈ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ರಾಜ್ಯದಲ್ಲೇ ಅತ್ಯಂತ ಪೈಪೋಟಿ ಇರುವ ಕ್ಷೇತ್ರಗಳ ಪೈಕಿ ಒಂದಾಗಲಿದೆ. ನಾನು ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಯಾವ ಶಕ್ತಿಗಳೂ ಕೂಡ ಇದನ್ನು ತಡೆಯಲು ಸಾಧ್ಯವಿಲ್ಲ. ಬ್ರಹ್ಮ ಹೇಳಿದರೂ ಕೂಡ ನಾನು ಕಣದಿಂದ ಹಿಂದೆ ಸರಿಯುವುದಿಲ್ಲ. ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ಪುನರ್ ಉಚ್ಚರಿಸಿದರು.
ತಮ್ಮ ಮಾತಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಂಡ ಕಾರಿದ ಈಶ್ವರಪ್ಪ, ಬಿಜೆಪಿಯನ್ನು ಸ್ವಚ್ಛಗೊಳಿಸಲು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಪಕ್ಷದಲ್ಲಿ ಅಪ್ಪ-ಮಕ್ಕಳ ಆಟ ಅತಿಯಾಗಿದೆ. ನನಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಬೆಂಬಲವಿದೆ. ಗೆದ್ದು ಮಾತನಾಡುತ್ತೇನೆ ಎಂದು ಕಿಡಿಕಾರಿದರು.