ತಿಪ್ಪೆಪಾಲಾಗುತ್ತಿರುವ ಗೇರು ಹಣ್ಣು;ಸಂಕಷ್ಟದಲ್ಲಿ ರೈತ

157
Share It

ಕ್ಯಾನ್ಸ‌ರ್ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ | ಬಡವರ ಸೇಬು ಗೇರು ಹಣ್ಣಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ

ನಾರಾಯಣಸ್ವಾಮಿ ಸಿ.ಎಸ್,

ಹೊಸಕೋಟೆ : ಬಡವರ ಸೇಬು ಖ್ಯಾತಿಯ ಹಲವು ಪೋಷಕಾಂಶಗಳ ಆಗರವಾಗಿರುವ ಗೇರು ಹಣ್ಣಿನ ಮಹತ್ವ ಅರಿಯದ ಸರಕಾರ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸದೇ ಇರುವುದರಿಂದ ಹಣ್ಣು ತಿಪ್ಪೆಯ ಪಾಲಾಗಿ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 110 ಹೆಕ್ಟೇರ್‌ನಲ್ಲಿ ರೈತರು ಗೇರು ಹಣ್ಣು ಬೆಳೆಯುತ್ತಾರೆ. ಏಪ್ರಿಲ್-ಮೇ ತಿಂಗಳಿನಲ್ಲಿ ಹೆಚ್ಚು ಪೋಷಕಾಂಶದಿಂದ ಕೂಡಿರುವ ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಸುವಾಸನೆ ಭರಿತವಾದ ಗೇರು ಹಣ್ಣುಗಳು ಹಳದಿ, ಕೆಂಪು ಹಾಗೂ ಕೇಸರಿ ಬಣ್ಣದಲ್ಲಿ ಗ್ರಾಹಕರ ಕಣ್ಮನ ಸೆಳೆಯುತ್ತವೆ.

ಗೇರು ಹಣ್ಣಿನಲ್ಲಿ ಆನೇಕ ವಿಟಮಿನ್‌ಗಳಿದ್ದು, ಗಾಯಗಳನ್ನು ಬೇಗನೆ ವಾಸಿ ಮಾಡುವ ಶಕ್ತಿ ಹೊಂದಿವೆ. ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳುಗಳನ್ನು ಸಾಯಿಸಲು, ಇದರಲ್ಲಿ ರೋಗ ನಿರೋಧಕ ಗುಣ ಅಧಿಕವಿದ್ದು, ಕ್ಯಾನ್ಸರ್ ತಡೆಯಲು ಸಹಕಾರಿ. ಮಧುಮೇಹ ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುವ ಅಂಶ ಇದರಲ್ಲಿದೆ.

ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದ ಕಾರಣ ಕಟಾವು ಸಮಯದಲ್ಲಿ ರೈತರು ಹಣ್ಣನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ಗೇರು ಹಣ್ಣನ್ನು ಸಂಸ್ಕರಿಸಿ ನಾನಾ ಉತ್ಪನ್ನಗಳಿಗೆ ಬಳಕೆಮಾಡುವ ಮೂಲಕ ಆರ್ಥಿಕವಾಗಿ ಲಾಭದಾಯಕ ಕೃಷಿಯನ್ನಾಗಿಸಿದ್ದಾರೆ.

ಕೇರಳ, ಗೋವಾ ಮತ್ತಿತರ ರಾಜ್ಯಗಳಲ್ಲಿನ ಸರಕಾರಗಳು ಅಲ್ಲಿನ ರೈತರಿಗೆ ಗೇರು ಹಣ್ಣನ್ನು ಸಂಸ್ಕರಿಸಿ ಸೂಕ್ತ ತರಬೇತಿ ಮೂಲಕ ಜ್ಯೂಸ್, ಹಲ್ವಾ, ಮತ್ತು ಜೆಲ್ ತಯಾರಿಸಿ ಮಾರಾಟ ಮಾಡುವುದಲ್ಲದೇ ಮದ್ಯ ತಯಾರಿಸಲು ಕೃಷಿಕರಿಂದಲೇ ನೇರವಾಗಿ ಹಣ್ಣನ್ನು ಖರೀದಿಸಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ರೈತರ ನೆರವಿಗೆ ನಿಂತಿವೆ.

ಬಂಜರು ಭೂಮಿಯಲ್ಲಿ ಕೂಲಿಕಾರರ ಕೊರತೆ ಎದುರಿಸುತ್ತಿರುವ ಕೃಷಿಕರಿಗೆ ಕಡಿಮೆ ಕೆಲಸದಲ್ಲಿ ಉಪ ಆದಾಯ ಪಡೆದುಕೊಳ್ಳಲು ಗೇರು ಬೆಳೆ ಅನುಕೂಲವಾಗಿದೆಯಾದರೂ ಸೂಕ್ತ ತಿಳಿವಳಿಕೆ ಕೊರತೆಯಿಂದ ಗೇರು ಹಣ್ಣು ರೈತರಿಗೆ ಲಾಭ ತರದೇ ತಿಪ್ಪೆಯ ಪಾಲಾಗಿ ಬೆಳೆಗಾರನಿಗೆ ಸಿಗಬೇಕಾದ ಆದಾಯಕ್ಕೆ ಕತ್ತರಿ ಬೀಳುವಂತಾಗಿದೆ.

  • 3 ಎಕರೆಯಲ್ಲಿ ಗೇರು ಹಣ್ಣು ಬೆಳೆದಿದ್ದು ವರ್ಷಕ್ಕೆ ಒಂದು ಬಾರಿ ಇದರ ಫಸಲನ್ನು ಪಡೆಯುತ್ತಿದ್ದು, ಗೇರು ಬೀಜದ ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಬೀಜ ಕೊಂಡುಕೊಳ್ಳುತ್ತಾರೆ. ಗೇರು ಬೀಜದ ಸಮೇತ ಕೆಜಿ ಲೆಕ್ಕದಲ್ಲಿದರ ನಿಗದಿ ಮಾಡಿ ಖರೀದಿಸುತ್ತಾರೆ. ಹಣ್ಣನ್ನು ಕೊಳ್ಳುವವರಿಲ್ಲದೇ ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಬಿಟ್ಟಿದ್ದು ಉಳಿಕೆ ಹಣ್ಣನ್ನು ಕಿತ್ತು ತಿಪ್ಪೆಗೆ ಸುರಿಯುತ್ತೇವೆ .
  • ಮಂಜುನಾಥ್ ಗೇರು ಕೃಷಿಕ, ದೊಡ್ಡಕೋಲಿಗ

ಗೇರು ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ, ಹಣ್ಣು ಕೂಯ್ದ ಮರು ದಿನವೇ ಮುದುಡಿ ಹೋಗುತ್ತದೆ ಸಂಸ್ಕರಿಸುವ ವಿಧಾನ ತಿಳಿದಿಲ್ಲವಾದ್ದರಿಂದ ಹಣ್ಣನ್ನು ಮಾರಾಟ ಮಾಡಲಾಗುತ್ತಿಲ್ಲ, ಗೇರು ಬೀಜದ ಆದಾಯಕ್ಕಾಗಿ ಕೃಷಿ ಮಾಡುತ್ತಿದ್ದು, ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತಾದರೆ ಬೆಳೆಗಾರನಿಗೆ ಇನ್ನಷ್ಟು ಆದಾಯ ಕಾಣಲೂ ಸಾಧ್ಯ. ಈ ಬಗ್ಗೆ ಸರಕಾರ ಕಾಳಜಿ ವಹಿಸಬೇಕು.

  • ಎನ್.ಸಿ.ಮುನಿರಾಜು, ತಾಲೂಕು ಕಾರ್ಯಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಹೊಸಕೋಟೆ.

Share It

You cannot copy content of this page