ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ವಿರೋಧಿ ಅಲೆ ಎದ್ದಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಹರಿಹರ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿ ವಿರೋಧಿ ಅಲೆ ಜೋರಾಗಿದ ಎನ್ನುವುದನ್ನು ಸ್ವತಃ ಬಿಜೆಪಿಯವರೇ ಗುರುತಿಸಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಹಾಗೂ ಬಿಜೆಪಿಗೆ ಸೋಲು ಖಂಡಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರ ಮತ ಯಾಚಿಸಿ ಮಾತನಾಡಿದರು. ಬಿಜೆಪಿಯ 25 ಸಂಸದರು ರಾಜ್ಯಕ್ಕಾಗಿರುವ ಅನ್ಯಾಯ ಎಂದೂ ಪ್ರಶ್ನಿಸಲಿಲ್ಲ. ಅವರಲ್ಲಿ ಹಲವರನ್ನು ಈ ಬಾರಿ ಬಿಜೆಪಿಯವರೇ ಕೈಬಿಟ್ಟಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸಂಸದರು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ , ಬಿಜೆಪಿಯವರೇ ಈ ಬಾರಿ ಹಲವರನ್ನು ಕೈಬಿಟ್ಟಿದ್ದಾರೆ ಎಂದರು.
ಹರಿಹರದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಏತ ನೀರಾವರಿ ಯೋಜನೆಗೆ ಚುನಾವಣೆ ನಂತರ ಚಾಲನೆ ನೀಡಲಾಗುವುದು. ನಾನು ನುಡಿದ ಮಾತಿನಂತೆ ನಡೆಯುವವನು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆಂದು ತಿಳಿಸಿದಂತೆ 8 ತಿಂಗಳ ಒಳಗೆ ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.
ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ,ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಜನರ ಪ್ರಶಂಸೆಯನ್ನು ಗಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರೈತ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಶಾದಿ ಭಾಗ್ಯಗಳಂತಹ ಜನಪರ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ ಎಂದರು.
ಬಿಜೆಪಿ ಜಾತಿಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು , ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ ಎಂದರು.
ಮುಸಲ್ಮಾನರ ವಿರುದ್ಧ ದಲಿತರನ್ನು, ಹಿಂದುಳಿದವರ ವಿರುದ್ಧ ದಲಿತರು, ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ. ಸಂವಿಧಾನದ ಮೀಸಲಾತಿ ಪ್ರಮಾಣದಲ್ಲಿ ಶೇ. 10 ರಷ್ಟನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಸೃಷ್ಟಿಸಿದರು ಎಂದರು.
ಸಂವಿಧಾನದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಕೊಡಬಹುದಾಗಿದೆ. ಮೋದಿಯವರು ಸಂವಿಧಾನವನ್ನು ಪೂರ್ಣ ತಿಳಿದಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾವು ಅಧಿಕಾರಕ್ಕೆ ಬಂದರೆ ಒಟ್ಟಾರೆ ಮೀಸಲಾತಿ ಪ್ರಮಾಣ ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದೇವೆಯೇ ಹೊರತು. ಒಬ್ಬರ ಮೀಸಲಾತಿ ಕಿತ್ತು ಮತ್ತೊಬ್ಬರಿಗೆ ಕೊಡುತ್ತೇವೆ ಎಂದು ಹೇಳಿಯೇ ಇಲ್ಲ ಎಂದರು.