- ಜಿಲ್ಲೆಯ ಮತದಾರರು ಅತ್ಯಂತ ಪ್ರಭುದ್ದರು
- ಎಲ್ಲಾ ಸಮಾಜದ ಜೊತೆ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತಮ ಸಂಬಂಧ
- ಸುಳ್ಳು, ಪ್ರಕರಣ, ಜಾತಿ ನಿಂದನೆ ಆಧಾರರಹಿತ ಆರೋಪ
ಕಲಬುರಗಿ: ಜಾತಿ ಜಗಳ, ಕೋಮು ಗಲಭೆ ಸೃಷ್ಠಿಸಿ ಬೆಂಕಿ ಹಚ್ಚುವ ಬಿಜೆಪಿಯ ರಾಜಕೀಯ ದುರುದ್ದೇಶ ಶರಣರ ನಾಡು ಕಲಬುರಗಿಯಲ್ಲಿ ನಡೆಯುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ದುರುದ್ದೇಶದಿಂದ ಕೆಲ ಘಟನೆಗಳಿಗೆ ಬಿಜೆಪಿಗರು ರಾಜಕೀಯ ಲೇಪ ಹಚ್ವುತ್ತಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು. ಜಾತಿ ಜಗಳ, ಕೋಮು ಗಲಭೆ ಸೃಷ್ಠಿಸಿ ಬೆಂಕಿ ಹಚ್ಚುವ ಬಿಜೆಪಿಯ ರಾಜಕೀಯ ದುರುದ್ದೇಶ ಶರಣರ ನಾಡು ಕಲಬುರಗಿಯಲ್ಲಿ ನಡೆಯುವುದಿಲ್ಲ. ಮತದಾರರು ಅತ್ಯಂತ ಪ್ರಬುದ್ಧರಾಗಿದ್ದಾರೆ. ಇಲ್ಲಿನ ಮತದಾರರು ಸತ್ಯ, ಸುಳ್ಳನ್ನು ತಾಳೆ ಮಾಡಿಯೇ ಅಭಿವೃದ್ಧಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಹಚ್ಚುವ ದುಷ್ಟ ಗುಣವಿದ್ದು, ಅದನ್ನು ಚುನಾವಣೆ ಹೊತ್ತಲ್ಲಿ ಮುನ್ನಲೆಗೆ ತಂದು ರಾಜಕೀಯ ಲಾಭ ಪಡೆಯುವ ಹುನ್ನಾರ ಅವರದ್ದಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ 51 ವರ್ಷ ಸುಧೀರ್ಘ ರಾಜಕೀಯ ಜೀವನದಲ್ಲಿ ಎಂದೂ ಕೂಡ ಇನ್ನೊಬ್ಬರಿಗೆ ನೋವು ಆಗದ ರೀತಿಯಲ್ಲಿ ಮಾತಾನಾಡಿಲ್ಲ, ಖರ್ಗೆ ಅವರ ಕುಟುಂಬ ಎಲ್ಲಾ ಸಮಾಜದ ಜೊತೆ ಅನ್ಯೋನ್ಯತೆ ಸಂಬಂಧ ಇಟ್ಟುಕೊಂಡಿದೆ ಎಂದು ಡಾ.ಶರಣ್ ಪ್ರಕಾಶ್ ಪಾಟೀಲ್ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸುಳ್ಳು ಪ್ರಕರಣ ಸೃಷ್ಟಿಸುವುದಾಗಲಿ, ಜಾತಿ ನಿಂದನೆ ಪ್ರಕರಣವಾಗಲಿ ಇಂತಹ ಯಾವುದೇ ಕೆಲಸ ಮಾಡಿಲ್ಲ. ಬದಲಿಗೆ ಎಲ್ಲಾ ಸಮಾಜದ ಜನರ ಜೊತೆ ಸಹಬಾಳ್ವೆಯಿಂದ ಬದುಕಿ, ಉತ್ತಮ ಆಡಳಿತ ನೀಡಿದ ‘ಅಭಿವೃದ್ಧಿ ಹರಿಕಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.