ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ಸಿಎಂ ಸ್ಥಾನದ ಆಸೆಗೆ ಸಿದ್ದರಾಮಯ್ಯ ದಲಿತಾಸ್ತ್ರ ಪ್ರಯೋಗ ಮಾಡಿದ್ದು, ದಲಿತ ಸಿಎಂ ಮಾಡಿದರಷ್ಟೇ ಸ್ಥಾನ ತ್ಯಾಗ ಮಾಡುವ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಪ್ರಸ್ತುತ ಸನ್ನಿವೇಶದಲ್ಲಿ ರಾಜೀನಾಮೆ ನೀಡಿ ಡಿಕೆ ಶಿವಕುಮಾರಗೆ ಸ್ಥಾನ ಬಿಟ್ಟುಕೊಡಬೇಕು ಎಂಬ ಒತ್ತಾಯ ಡಿಕೆಶಿ ಬೆಂಬಲಿಗರ ಕಡೆಯಿಂದ ಕೇಳಿಬಂದಿತ್ತು. ಇದಕ್ಕೆ ಕೌಂಟರ್ ಕೊಟ್ಟಿರುವ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ದಲಿತಾಸ್ತ್ರ ಪ್ರಯೋಗ ಮಾಡಿಸಿದ್ದಾರೆ.
ಸಿದ್ದರಾಮಯ್ಯ ಬೆಂಬಲಿತ 90 ಶಾಸಕರು ಡಾ ಜಿ ಪರಮೇಶ್ವರ್ ಅವರ ಪರವಾಗಿ ಸಹಿ ಮಾಡಿದ್ದು ಹೈಕಮಾಂಡ್ ಗೆ ಪತ್ರ ಕಳಿಸಿದ್ದಾರೆ ಎನ್ನಲಾಗಿದೆ. ಜತೆಗೆ ದೆಹಲಿಯ ಕರ್ನಾಟಕ ಭವನದಲ್ಲಿ ದಲಿತ ನಾಯಕರು ಮತ್ತು ಸಿದ್ದರಾಮಯ್ಯ ಬೆಂಬಲಿಗರು ಉಪಾಹಾರ ಕೂಟ ನಡೆಸಿದ್ದಾರೆ.
ಸಭೆಯಲ್ಲಿ ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್ ಸಿ ಮಹದೇವಪ್ಪ ಸೇರಿ ಅನೇಕ ದಲಿತ ನಾಯಕರು ಭಾಗವಹಿಸಿದ್ದು, ಸಿದ್ದರಾಮಯ್ಯ ಬೆಂಬಲಿಗರಾದ ಬೈರತಿ ಸುರೇಶ್, ಬಿ ಕೆ ಹರಿಪ್ರಸಾದ್ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಭೆಯ ಮೂಲಕ ಸಿದ್ದರಾಮಯ್ಯ ಹೈಕಮಾಂಡ್ ಗೆ ಸ್ಪಷ್ಟ ಸಂದೇಹ ನೀಡಿದ್ದಾರೆ. ತಾವು ರಾಜೀನಾಮೆ ಕೊಡಲು ಸಿದ್ಧ, ಆದರೆ, ಆ ಸ್ಥಾನವನ್ನು ಸೂಕ್ತ ವ್ಯಕ್ತಿಗೆ ನೀಡಬೇಕು ಅದರಲ್ಲೂ ದಲಿತ ಸಮುದಾಯಕ್ಕೆ ಈವರೆಗೆ ಸಿಎಂ ಸ್ಥಾನ ನೀಡುವಲ್ಲಿ ಅನ್ಯಾಯವಾಗಿದೆ. ಆ ಅನ್ಯಾಯ ಸರಿಮಾಡುವುದಾದರೆ ತಾವು ರಾಜೀನಾಮೆಗೆ ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ದಲಿತ ಸಿಎಂ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಇಡೀ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಲ್ಲಲಿದೆ. ಜತೆಗೆ 2013 ರಲ್ಲಿ ಡಾ ಪರಮೇಶ್ವರ್ ಅವರಿಗೆ ಅನ್ಯಾಯವಾಗಿದೆ ಎಂಬ ಮಾತಿದೆ. ಈಗ ಅವರನ್ನು ಸಿಎಂ ಮಾಡಿದರೆ ಅದೆಲ್ಲವನ್ನೂ ಮೀರಿದಂತೆ ಆಗುತ್ತದೆ ಎಂಬ ವಿಷಯವನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಡಿಕೆ ಶಿವಕುಮಾರ್, 2028ಕ್ಕೆ ನಮ್ಮದೇ ಸರಕಾರ ಎಂಬ ಹೇಳಿಕೆ ನೀಡಿರುವುದು. ಜತೆಗೆ ಕಳೆದ ಸಲದಂತೆ ತಾನು ಹೇಳಿದಂತೆಯೇ ಇಂತಿಷ್ಟೇ ಸ್ಥಾನಗನ್ನು ಗೆಲ್ಲುವ ಭರವಸೆ ನೀಡಿದ್ದಾರೆ. ಆ ಮೂಲಕ ತಾನು 2028 ಕ್ಕೆ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಈಗ ಪ್ರಯತ್ನವಷ್ಟೇ ಮಾಡಿ, ವಿಫಲವಾದರೆ ಮುಂದಿನ ಅವಧಿಗೆ ತನಗೆ ಪ್ರತಿಸ್ಪರ್ಧಿ ಇಲ್ಲದಂತೆ ಮಾಡುವ ಪ್ರಯತ್ನವಷ್ಟೇ ನಡೆಸಲು ತೀರ್ಮಾನಿಸಿದ್ದಾರೆ.

