ಮೈಸೂರು : ಪೆನ್‌ಡ್ರೈವ್ ಬಹಿರಂಗಗೊಂಡ ಪ್ರಕರಣದಲ್ಲಿ ಬಿಜೆಪಿ ನಾಯಕ ದೇವರಾಜೇಗೌಡ ಪಾತ್ರ ಏನು, ಎಷ್ಟು ಹಣ ಪಡೆದರು? ನಗದಾಗಿ ಎಷ್ಟು? ಆನ್‌ಲೈನ್‌ನಲ್ಲಿ ಎಷ್ಟು ತೆಗೆದುಕೊಂಡಿದ್ದಾರೆ? ಎಂಬ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ. ಒಂದೊಂದಾಗಿ ಬಹಿರಂಗಗೊಳಿಸುತ್ತೇವೆ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಎಚ್ಚರಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಕೃತ್ಯದ ಬಗ್ಗೆ ಚರ್ಚೆ ಮಾಡದೇ ಪೆನ್‌ಡ್ರೈವ್ ಬಹಿರಂಗಪಡಿಸಿದ್ದವರ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಲಾಗುತ್ತಿದೆ. ಕೊಲೆಯಾದಾಗ ಪ್ರಾಣ ಹಾನಿ ಮುಖ್ಯವಾಗುತ್ತದೋ? ಕೃತ್ಯಕ್ಕೆ ಬಳಸಿದ ಕತ್ತಿ ತಯಾರು ಮಾಡಿದ ವ್ಯಕ್ತಿ ಮುಖ್ಯವೋ? ಎಂದು ಪ್ರಶ್ನಿಸಿದರು.
ಎಚ್.ಡಿ.ಕುಮಾರಸ್ವಾಮಿ ಗಾಜಿನ ಮನೆಯಲ್ಲಿ ಕುಳಿತುಕೊಂಡು ತಮ ವಿರುದ್ಧ ಬೇರೆಯವರು ಕಲ್ಲು ಹೊಡೆಯದಂತೆ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಅದೇ ಗಾಜಿನ ಮನೆಯಲ್ಲಿ ಕುಳಿತು ಕುಮಾರಸ್ವಾಮಿಯವರು ಬೇರೆ ಯಾರ ಮೇಲಾದರೂ ಕಲ್ಲು ಎಸೆಯಬಹುದು. ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರಷ್ಟೆ ಯಾಕೆ, ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಿ ಎಂದು ನಾವು ಕೂಡ ಒತ್ತಾಯಿಸುತ್ತೇವೆ ಎಂದು ಹೇಳಿದರು.