ಧಾರ್ಮಿಕ ಸ್ಥಳದಲ್ಲಿ ಪ್ರಚಾರ: ಎಫ್‌ಐಆರ್ ರದ್ದುಕೋರಿ ಹೈಕೋರ್ಟ್ಗೆ ಮನವಿ
ಬೆಂಗಳೂರು: ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ಮಾಡಿದ ಕಾರಣಕ್ಕೆ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿಯನ್ನು ತುರ್ತಾಗಿ ವಿಚಾರಣೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠದ ಮುಂದೆ ರಾಘವೇಂದ್ರ ಪರ ವಕೀಲರು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಮುಂದಿನ ವಾರದಲ್ಲಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು. ೨೦೨೪ರ ಮಾ.೨೩ರಂದು ಬೆಳಗ್ಗೆ ೧೧ ಗಂಟೆಯಲ್ಲಿ ಚಿತ್ರದುರ್ಗದ ಸಿದ್ದೇಶ್ವರ ಭೋವಿ ಸಮಾಜ ಗುರುಪೀಠದಲ್ಲಿ ಸಭೆ ನಡೆಸಿದ್ದರು.
ಈ ವೇಳೆ ರಾಜಕೀಯ ಮತದಾರರ ಮೇಲೆ ಪ್ರಭಾವ ಬೀರಲು ಭಾಷಣ ಮಾಡಿ ಧಾರ್ಮಿಕ ಸ್ಥಳವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸಭೆ ನಡೆಸಲು ಚುನಾವಣಾ ಆಯೋಗದಿಂದ ಪೂರ್ವಾನುಮತಿ ಸಹ ಪಡೆದಿಲ್ಲ. ಆ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಂಚಾರಿ ವಿಚಕ್ಷಣಾ ದಳದ ಅಧಿಕಾರಿ ಪಿ.ಅವಿನಾಶ್ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಅದನ್ನು ಪರಿಗಣಿಸಿದ್ದ ಪೊಲೀಸರು, ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯ್ದೆ-೧೯೮೮ ಮತ್ತು ಜನಪ್ರತಿನಿಧಿಗಳ ಕಾಯ್ದೆ-೧೯೫೧ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೭೧ಎಫ್ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರಿದ) ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದನ್ನು ರದ್ದುಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ರಾಘವೇಂದ್ರ ಅವರು, ತಾವು ಎಸಗಿದ್ದೇವೆ ಎನ್ನಲಾದ ಅಪರಾಧಗಳ ಬಗ್ಗೆ ಎಫ್‌ಐಆರ್‌ನಲ್ಲಿ ಮಾಹಿತಿ ಉಲ್ಲೇಖಿಸಿಲ್ಲ. ಹಾಗಾಗಿ, ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸಿದರೆ, ಅದು ಕಾನೂನಿನ ದುರ್ಬಳಕೆಯಾಗಲಿದೆ. ಹಾಗಾಗಿ, ತಮ್ಮ ವಿರುದ್ಧ ಎಫ್‌ಐಆರ್ ಮತ್ತು ಅದಕ್ಕೆ ಸಂಬAಧಿಸಿದ ಎಲ್ಲ ಪ್ರಕ್ರಿಯೆಗಳನ್ನು ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.