ಬೆಳಗಾವಿ : ಆಸ್ತಿ ಗಳಿಕೆ ವಿಚಾರವಾಗಿ ಹಿಟ್ ಅಂಡ್ ರನ್ ಹೇಳಿಕೆ ನೀಡುವುದರ ಬದಲಾಗಿ ದಾಖಲೆಗಳ ಸಹಿತ ವಿಧಾನಸಭೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ದನಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಇಂದು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಿಷ್ಟು…
“ಪದೇಪದೇ ನನ್ನ ಆಸ್ತಿ ಗಳಿಕೆ ಬಗ್ಗೆ ಬಿಜೆಪಿಯವರು ಹೇಳಿಕೆಗಳನ್ನು ನೀಡಿದ್ದಾರೆ, ಸಿಬಿಐ, ಇಡಿಯವರು ತನಿಖೆ ಮಾಡಿದ್ದಾರೆ. ಕುಮಾರಸ್ವಾಮಿಯವರು ಹಲವಾರು ಬಾರಿ ಆಸ್ತಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನನ್ನ ಆಸ್ತಿಯ ಬಗ್ಗೆಯೂ ಎಚ್.ಡಿ.ಕುಮಾರಸ್ವಾಮಿ ಅವರು ದಾಖಲೆಗಳೊಂದಿಗೆ ಬರಲಿ, ನಾನೂ ಅವರು ಮತ್ತು ಅವರ ಕುಟುಂಬದ ಆಸ್ತಿಗಳ ಕುರಿತು ದಾಖಲೆಗಳೊಂದಿಗೆ ಬರುತ್ತೇನೆ. ಕುಮಾರಸ್ವಾಮಿ, ಅವರ ಅಣ್ಣ ಮತ್ತು ಸರ್ಕಾರಿ ಸೇವೆಯಲ್ಲಿದ್ದ ಮತ್ತೊಬ್ಬರು ಸೇರಿದಂತೆ ಎಲ್ಲರ ಬಳಿ ಎಷ್ಟು ಆಸ್ತಿ ಇತ್ತು, ಎಷ್ಟು ಹೆಚ್ಚಾಗಿದೆ ಎಂಬ ವಿವರಗಳು ಅಧಿಕೃತವಾಗಿ ದಾಖಲೆಯಾಗುವಂತೆ ವಿಧಾನಸಭೆಯಲ್ಲಿಯೇ ಚರ್ಚೆಯಾಗಲಿ.ಮಾದ್ಯಮಗಳ ಮುಂದೆ ಹೇಳಿಕೆ ನೀಡಿ ಓಡಿಹೋಗುವುದು ಬೇಡ ಎಂದು ಡಿಕೆಶಿ ಸವಾಲು ಹಾಕಿದರು.
ಕುಮಾರಸ್ವಾಮಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿ, ಸ್ವಾಭಿಮಾನವನ್ನು ಕೆಣಕಿದ್ದಾರೆ. ಮಹಿಳೆಯರ ಘನತೆಗೆ ಕುಂದುಂಟು ಮಾಡಿದ್ದಾರೆ. ಅವರ ಕ್ಷಮಾಪಣೆ ವಿಷಾದದ ನಾಟಕವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.
ಪಂಚಖಾತ್ರಿಗಳ ಬಗ್ಗೆ ಟೀಕೆ ಮಾಡುವ ಕುಮಾರಸ್ವಾಮಿಯವರು ಅವರ ಮತ್ತು ಬಿಜೆಪಿಯಲ್ಲಿರುವ ಫಲಾನುಭವಿಗಳು ಯೋಜನೆಗಳನ್ನು ಬಳಸಿಕೊಳ್ಳದಂತೆ ಕರೆ ನೀಡಲಿ. ಕನಿಷ್ಟ 5 ಮಂದಿ ಅವರ ಪಕ್ಷದ ಕಾರ್ಯಕರ್ತರು ಯೋಜನೆಗಳನ್ನು ಬಿಟ್ಟುಬಿಡಲಿ. ಆನಂತರ ಅವರು ಟೀಕೆ ಮಾಡಲಿ. ಈ ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಕುಮಾರಸ್ವಾಮಿಯವರ ಜೊತೆ ಮೈತ್ರಿ ಮಾಡಿಕೊಂಡಿದ್ದು ನಿಜ. ಅವರ ಸರ್ಕಾರವನ್ನು ತೆಗೆದವರ ಜೊತೆಯಲ್ಲಿಯೇ ಈಗ ಗಳಸ್ಯಕಂಠಸ್ಯರಾಗಿದ್ದಾರೆ.
ಒಂದು ವರ್ಷದ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರಧಾನಿ ನರೇಂದ್ರಮೋದಿಯವರು, ಗೃಹ ಸಚಿವ ಅಮಿತ್ ಷಾ ಅವರು ದೇವೇಗೌಡರು ಹಾಗೂ ಅವರ ಕುಟುಂಬದವರ ಬಗ್ಗೆ ಏನೆಲ್ಲಾ ಹೇಳಿಕೆ ನೀಡಿದ್ದರು. ಜೆಡಿಎಸ್ ನಾಯಕರು ಮೋದಿ ಬಗ್ಗೆ ಏನೆಲ್ಲಾ ವ್ಯಾಖ್ಯಾನ ಮಾಡಿದ್ದರು ಎಂಬುದನ್ನು ಜನ ಮರೆತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.