“ಮಾಸ್ತಿ” ಕೊಲೆ ಆರೋಪಿಗಳಿಗೆ ತಕ್ಕ ಶಾಸ್ತಿ: 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚನ್ನರಾಯಪಟ್ಟಣ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ “ಮಾಸ್ತಿ” ಎಂಬ ರೌಡಿಶೀಟರ್ ಕೊಲೆ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಮಾಸ್ತಿ ಕೊಲೆ ಪ್ರಕರಣದಲ್ಲಿ ಭಾಗವಹಿಸಿದ್ದ 9 ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತಿಬ್ಬರು ಆರೋಪಿಗಳಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಮಾಡಿದೆ. ಯಾಚೇನಹಳ್ಳಿ ಚೇತು ಎಂಬ ರೌಡಿಶೀಟರ್, ಮಾಸ್ತಿ ಎಂಬ ಮತ್ತೊಬ್ಬ ರೌಡಿಶೀಟರ್‌ನನ್ನು ಕಲಬುರಗಿ ಜೈಲಿನಲ್ಲಿದ್ದುಕೊಂಡೇ ಸ್ಕೆಚ್ ಹಾಕಿ ಹೊಡಿಸಿದ್ದ.
ಜನನಿಬಿಡ ಪ್ರದೇಶದಲ್ಲಿಯೇ ಬೆಂಗಳೂರು-ಮಂಗಳೂರು ಹೈವೆಯಲ್ಲಿ ಪಟ್ಟಣದ ನಡುರಸ್ತೆಯಲ್ಲಿಯತೇ ಹಾಡುಹಗಲೇ ಮಾಸ್ತಿಯನ್ನು ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ್ದರು, ಈ ಸಂಬಂಧ ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ ವಸಂತ್ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಪ್ರಕರಣದ ತನಿಖೆಯನ್ನು ಭಾರಿ ಬಿಗಿಭದ್ರತೆಯೊಂದಿಗೆ ನಡೆಸಿದ್ದರು. ಜೈಲಿನಲ್ಲಿದ್ದುಕೊಂಡೇ ಯಾಚೇನಹಳ್ಳಿ ಚೇತು ಮತ್ತು ಸಹಚರರು ಕೊಲೆ ಮಾಡಿಸಿರುವುದು ಸಾಭೀತಾಗಿತ್ತು.
ಘಟನೆ ನಡೆದ ನಂತರ ತಾಲೂಕಿನಾದ್ಯಂತ ಪೊಲೀಸರ ಕಾರ್ಯದಕ್ಷತೆಯ ಬಗ್ಗೆಯೇ ಅನುಮಾನ ಮೂಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ತನಿಖೆಯುದ್ದಕ್ಕೂ, ಸಾಕ್ಷಿಗಳನ್ನು ಬೆದರಿಸುವ, ಹಲ್ಲೆ ನಡೆಸುವಂತಹ ಪ್ರಯತ್ನಗಳು ನಡೆದಿದ್ದವು. ಕೆಲವು ದೊಡ್ಡ ಮಟ್ಟದ ರಾಜಕೀಯ ಒತ್ತಡವೂ ಪ್ರಕರಣದ ಮೇಲಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ಸೂಕ್ತ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು.
ಇದೀಗ ನ್ಯಾಯಾಲಯ ವಿಚಾರಣೆ ನಡೆಸಿ, ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಜೈಲಿನಲ್ಲಿದ್ದುಕೊಂಡೇ ಸ್ಕೆಚ್ ಹಾಕಿಸಿದ ಯಾಚೇನಹಳ್ಳಿ ಚೇತು ಸೇರಿದಂತೆ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ.
ನಟೋರಿಯಸ್ ರೌಡಿಗೆ ಕೊನೆಗೂ ಶಿಕ್ಷೆ: ಯಾಚೇನಹಳ್ಳಿ ಚೇತು ವಿರುದ್ಧ ಸುಮಾರು ೨೭ ಪ್ರರಕಣ ದಾಖಲಾಗಿದ್ದರೂ, ಆತನನ್ನು ಒಂದೇ ಒಂದು ಪ್ರಕರಣದಲ್ಲಿ ಅಪರಾಧಿ ಎಂದು ಸಾಭೀತು ಮಾಡಲು ಸಆಧ್ಯವಾಗಿರಲಿಲ್ಲ. ಈ ಪ್ರರಕಣದಲ್ಲಿಯೂ ಜೈಲಿನಲ್ಲಿದ್ದುಕೊಂಡೇ ಸ್ಕೆಚ್ ಹಾಕಿದ್ದರೂ, ಆತನನ್ನು ಆರೋಪಿ ಎಂದು ಸಾಭೀತು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿಸಂ ಅಟ್ಟಹಾಸಕ್ಕೆ ಕಡಿವಾಣ ಹಾಕಲೇಬೇಕು ಎಂಬ ಕಾರಣದಿಂದ ಪೊಲೀಸರು ನಡೆಸಿದ ಕಾರ್ಯಾಚರಣೆ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.