ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಶಂಕಾಸ್ಪದ ಸಾವು!

Share It

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್​ ಅವರು ನಿಧನರಾಗಿದ್ದಾರೆ. ಅವರು ಬೆಂಗಳೂರಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಹೇಳಲಾಗಿದೆ. ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ ಪ್ರಯೋಜನ ಆಗಲಿಲ್ಲ. ‘ಅಪ್ಪು ಪಪ್ಪು’, ‘ಸ್ನೇಹಿತರು’ ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಬೆಂಗಳೂರಿನಲ್ಲಿ ಜೆಟ್​ಲಾಗ್​ ಪಬ್​ ಹೊಂದಿದ್ದ ಜಗದೀಶ್​ ಅವರು ಬಿಲ್ಡರ್​ ಕೂಡ ಆಗಿದ್ದರು. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​, ರಾಕ್​ಲೈನ್​ ವೆಂಕಟೇಶ್​ ಮುಂತಾದ ಸೆಲೆಬ್ರಿಟಿಗಳ ಜೊತೆ ಅವರು ಆಪ್ತ ಒಡನಾಟ ಹೊಂದಿದ್ದರು.

ಅನೇಕ ವಿವಾದಗಳ ಕಾರಣದಿಂದಲೂ ಸೌಂದರ್ಯ ಜಗದೀಶ್​ ಅವರು ಆಗಾಗ ಸುದ್ದಿ ಆಗಿದ್ದರು. ನೆರೆಹೊರೆಯವರ ಜೊತೆ ಅವರ ಕುಟುಂಬದವರು ಗಲಾಟೆ ಮಾಡಿಕೊಂಡಿದ್ದು ಕೂಡ ಭಾರಿ ವಿವಾದ ಸೃಷ್ಟಿಸಿತ್ತು. ಕೆಲವೇ ತಿಂಗಳ ಹಿಂದೆ ‘ಕಾಟೇರ’ ಚಿತ್ರತಂಡದವರು ‘ಜೆಟ್​ಲಾಗ್​’ ಪಬ್​ನಲ್ಲಿ ರಾತ್ರಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪ ಕೂಡ ಕೇಳಿಬಂದಿತ್ತು. ಆ ಬಳಿಕ 25 ದಿನಗಳ ಕಾಲ ರೆಸ್ಟೋ ಬಾರ್​ ಲೈಸೆನ್ಸ್​ ರದ್ದು ಮಾಡಲಾಗಿತ್ತು. ಮೂಲಗಳ ಪ್ರಕಾರ, ಕೆಲವೇ ದಿನಗಳ ಹಿಂದೆ ಬ್ಯಾಂಕ್​ನವರು ಸೌಂದರ್ಯ ಜಗದೀಶ್​ ಅವರ ಮನೆಯನ್ನು ಸೀಜ್​ ಮಾಡಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಯಾವ ಕಾರಣಕ್ಕಾಗಿ ಸೌಂದರ್ಯ ಜಗದೀಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್ ಅವರು ತಮ್ಮ ಪುತ್ರ ಸ್ನೇಹಿತ್​ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಹಲವು ಸಿನಿಮಾಗಳ ವಿತರಣೆಯನ್ನೂ ಅವರು ಮಾಡಿದ್ದರು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಜೊತೆ ಅವರು ಸ್ನೇಹ ಹೊಂದಿದ್ದರು. ಇತ್ತೀಚೆಗಷ್ಟೇ ಪ್ರಿಯಾಂಕಾ ಉಪೇಂದ್ರ ಅವರು ಆಯೋಜಿಸಿದ್ದ ಹೋಳಿ ಸಂಭ್ರಮದಲ್ಲಿ ಸೌಂದರ್ಯ ಜಗದೀಶ್​ ಭಾಗಿಯಾಗಿದ್ದರು.

ಸೌಂದರ್ಯ ಜಗದೀಶ್ ಅವರ ಸಾವಿನ ಕುರಿತಂತೆ ತನಿಖೆ ನಡೆಯಲಿದೆ. ಆ ಬಳಿಕ ಅವರ ನಿಧನಕ್ಕೆ ಸ್ಪಷ್ಟ ಕಾರಣ ಏನೆಂಬುದು ಗೊತ್ತಾಗಲಿದೆ. ಅವರ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.


Share It

You cannot copy content of this page