ಉಪಯುಕ್ತ ಸುದ್ದಿ

ಮೇ 29ರಿಂದ ಶಾಲೆಗಳು ಪುನರಾರಂಭ

Share It

ಬೆಂಗಳೂರು: ರಾಜ್ಯದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಮೇ 26 ರಿಂದ ಆರಂಭಿಸಲು ಸರಕಾರ ತೀರ್ಮಾನಿಸಿದ್ದು, ಎಲ್ಲ ರಾಜ್ಯ ಪಠ್ಯಕ್ರಮದ ಶಾಲೆಗಳು ಅಂದಿನಿಂದಲೇ ಕಾರ್ಯಾರಂಭ ಮಾಡಲಿವೆ.

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಈ ಆದೇಶ ಅನ್ವಯವಾಗಲಿದೆ. 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ ಮೇ.26 ರಂದು ಶಾಲೆಗಳನ್ನು ತೆರೆಯುವಂತೆ ಸೂಚಿಸಿದೆ.

2024ರ ಮೇ 29ರಿಂದ ಅಕ್ಟೋಬರ್ 2 ರವರೆಗೆ ಶೈಕ್ಷಣಿಕ ವರ್ಷದ ಮೊದಲನೇ ಅವಧಿಯಾಗಿದ್ದು, ಅಕ್ಟೋಬರ್ 21ರಿಂದ 2025ರ ಏಪ್ರಿಲ್ 10 ರವರೆಗೆ ಶೈಕ್ಷಣಿಕ ವರ್ಷದ ಎರಡನೇ ಅವಧಿಯಾಗಿರಲಿದೆ. ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ ಇರಲಿದ್ದು, 2025ರ ಏಪ್ರಿಲ್ 11 ರಿಂದ ಮೇ 28ರವರೆಗೆ ಬೇಸಿಗೆ ರಜೆಯನ್ನು ನಿಗದಿ ಮಾಡಿ ಸುತ್ತೋಲೆ ಹೊರಡಿಸಲಾಗಿದೆ.

ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ 224 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು ವಿಭಾಗಿಸಲಾಗಿದೆ. ಏಪ್ರಿಲ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸ್ತುತ ಚಾಲ್ತಿ ಇರುವ ಲೋಕಸಭಾ ಚುನಾವಣಾ ಮಾರ್ಗಸೂಚಿ ಪ್ರಕಾರ ಇದನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಕ್ರಿಸ್ ಮಸ್ ರಜೆ ನೀಡಲು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಆಯಾ ಜಿಲ್ಲೆಯ ಉಪ ನಿರ್ದೇಶಕರಿಗೆ ಕೋರಿಕೆ ಸಲ್ಲಿಸಿ ಅನುಮತಿ ಪಡೆಯಬೇಕು ಆ ರಜಾ ದಿನಗಳನ್ನು ಅಕ್ಟೋಬರ್ ನಲ್ಲಿ ನೀಡುವ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.


Share It

You cannot copy content of this page