ಉಪಯುಕ್ತ ರಾಜಕೀಯ ಸುದ್ದಿ

ಬರ ಪರಿಹಾರ ನೀಡದ ಕೇಂದ್ರಕ್ಕೆ ಸುಪ್ರೀಂ ತರಾಟೆ

Share It

ನವದೆಹಲಿ: ಪ್ರತಿ ವಿಚಾರಕ್ಕೂ ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾ? ರಾಜ್ಯಗಳ ಅಹವಾಲನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರಕ್ಕಿರುವ ಸಮಸ್ಯೆಯೇನು?

ಇದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪರಿ. ಬರ‌ಪರಿಹಾರ, ಜಿಎಸ್ ಟಿ ಅನುದಾನ ನೀಡುವಲ್ಲಿ ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಪ್ರಶ್ನಿಸಿ, ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಮೇಲಿನಂತೆ ಚಳಿ ಬಿಡಿಸಿತು.

ನಂತರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿ, ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚನೆ ನೀಡಿತು. ಇದರ ಜತೆಗೆ ಕರ್ನಾಟಕದ ಅರ್ಜಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಪೈಪೋಟಿ ನಡೆಸದಂತೆ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿತು. ಎರಡು ದಿನಗಳ ಹಿಂದೆ ತಮಿಳು ನಾಡು ಸರಕಾರ ಅರ್ಜಿ ಸಲ್ಲಿಸಿದ್ದು, ಉಳಿದ ಅನೇಕ ರಾಜ್ಯ ಸರಕಾರಗಳು ಅರ್ಜಿ ಸಲ್ಲಿಸಲು ಮುಂದಾಗಿರುವ ಕುರಿತು ಈ ಮಾತನ್ನು ಸುಪ್ರೀಂ ಕೋರ್ಟ್ ಹೇಳಿದೆ.

ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಸರ್ಕಾರವು ಈ ವಿಚಾರವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಒಂದು ಹಂತದಲ್ಲಿ ಸಮಸ್ಯೆಯನ್ನು ಪರಿಹರಿಸಬಹುದಿತ್ತು ಎಂದು ಹೇಳಿದರು. “ಈ ಮಾತುಕತೆ ಸಮಸ್ಯೆಯನ್ನು ಪರಿಹರಿಸುತ್ತವೆಯೇ?” ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನಿಸಿತು. ವಿವಿಧ ರಾಜ್ಯ ಸರ್ಕಾರಗಳು ನ್ಯಾಯಾಲಯದ ಮೊರೆ ಹೋಗುವುದನ್ನು ನ್ಯಾಯಾಲಯ ಗಮನಿಸುತ್ತಿದೆ. ಎರಡು ವಾರಗಳಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿತು.

ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಕಾನೂನಿನ ಪ್ರಕಾರ ಈ ವಿಷಯವನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸಬೇಕಾಗಿತ್ತು. ಆದರೆ ಅದು 2023ರ ಡಿಸೆಂಬರ್ನಲ್ಲಿ ಕೊನೆಗೊಂಡಿತು. ಕಾನೂನು ಇಲ್ಲಿದೆ, ಈ ವೇಳೆ ನಾವು ವಿವಾದಕ್ಕೆ ಇಳಿಯಬಾರದು” ಎಂದು ಹೇಳಿದರು.

ಕರ್ನಾಟಕದ ಪರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಕಲಾಪದಲ್ಲಿ ಭಾಗವಹಿಸಿದ್ದರು. ತೆರಿಗೆ ಅನ್ಯಾಯದ ಕುರಿತು ಕೇಂದ್ರ ಸಚಿವರೊಂದಿಗೆ ಬಹಿರಂಗ ಶಹ್ವಾನ ನೀಡಿದ್ದ ಸಚಿವರು, ಇದೀಗ ಕಾನೂನು ಹೋರಾಟದ ಮೂಲಕ ರಾಜ್ಯಕ್ಕೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ.


Share It

You cannot copy content of this page