ಅಂಕಣ ರಾಜಕೀಯ ಸುದ್ದಿ

ಬಲಿಷ್ಠರ ಕಣ್ಣೀರು ಮತ್ತು ಆತ್ಮಹತ್ಯೆ, ಸಾಮಾನ್ಯರಿಗೊಂದು ಪಾಠ

Share It

ಅಬ್ಬರಿಸಿ ಬೊಬ್ಬಿಡುವ ಬಲಿಷ್ಠ ವ್ಯಕ್ತಿಗಳು ಸಹ ಒಂದು ಸಣ್ಣ ಕಷ್ಟಕ್ಕೆ ಕಣ್ಣೀರು ಸುರಿಸುತ್ತಾರೆ.
ಅದು ಸಹಜ ನಿಜ, ಆದರೆ ಅಧಿಕಾರದಲ್ಲಿ ಇದ್ದಾಗ‌ ಆ ಸಹಜತೆ ನೆನಪಾಗುವುದಿಲ್ಲ ಎಂಬುದೇ ವಿಷಾದನೀಯ.

ಎಸ್ಐಟಿ ಕಚೇರಿಯಲ್ಲಿ ಮಾಜಿ ಸಚಿವ ರೇವಣ್ಣ ಕಣ್ಣೀರು ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಬಂಡೆ ಎಂದು ಮಾಧ್ಯಮ ಮತ್ತು ಜನರಿಂದ ಕರೆಯಲಾಗುತ್ತಿದ್ದ ಬಲಿಷ್ಠ ವ್ಯಕ್ತಿ ಡಿ.ಕೆ. ಶಿವಕುಮಾರ್, ಸಾರ್ವಜನಿಕವಾಗಿ ಒಂದು ಭ್ರಷ್ಟಾಚಾರದ ವಿಚಾರಣೆಯ ವಿಷಯದಲ್ಲಿ ಮಾಧ್ಯಮಗಳ ಮುಂದೆ ಗಳಗಳನೆ ಅಳುತ್ತಾರೆ.

ರಾಷ್ಟ್ರದ ಪ್ರಖ್ಯಾತ ವಕೀಲರು, ಆಡಿಟರ್ ಗಳು, ಅತ್ಯಂತ ಶ್ರೀಮಂತರು, ಅಪಾರ ಅಭಿಮಾನಿಗಳ ಬಳಗ ಹೊಂದಿದ್ದರು ಭಯ ಮತ್ತು ಒತ್ತಡದ ಕಾರಣದಿಂದಾಗಿ ಭಾವನೆ ನಿಯಂತ್ರಿಸಲಾಗಲಿಲ್ಲ. ಮೇಲ್ನೋಟಕ್ಕೆ ತಂದೆಯ ಎಡೆ ಹಬ್ಬದ ನೆಪ ಹೇಳಿದರು. ಅದು ಅಂತಹ ಸೂಕ್ತ ಕಾರಣ ಎನಿಸುತ್ತಿಲ್ಲ. ಅದನ್ನು ಮುಂದಿನ ದಿನಗಳಲ್ಲಿಯೂ ಮಾಡಬಹುದಿತ್ತು.

ಕಾಫಿಯ ಸೇವನೆಯಿಂದ ಬಹಳಷ್ಟು ಉಲ್ಲಸಿತ ಬದಲಾವಣೆ ಆಗಬಹುದು ಎಂಬ ಟ್ಯಾಗ್ ಲೈನ್ ಹೊತ್ತು ಕಾಫಿಯನ್ನು ಅಂತರರಾಷ್ಟ್ರೀಯವಾಗಿ ಹೆಚ್ಚು ಜನಪ್ರಿಯಗೊಳಿಸಿದ, ಕೆಲ ವರ್ಷಗಳ ಹಿಂದೆ ಭಾರತದ ಶ್ರೀಮಂತರ ಪಟ್ಟಿಯಲ್ಲಿದ್ದ ಸಿದ್ದಾರ್ಥ ಯಾವುದೋ ಒತ್ತಡದಿಂದ ಹರಿಯುವ ನೀರಿಗೆ ಹಾರಿ ಪ್ರಾಣ ಬಿಡುತ್ತಾರೆ.

ಮುಂಬಯಿನ ಅತ್ಯಂತ ಟಪ್ ಪೋಲೀಸ್ ಅಧಿಕಾರಿಯಾಗಿ ಸುಮಾರು 40/50 ಕುಖ್ಯಾತ ಕ್ರಿಮಿನಲ್ ಗಳನ್ನು ಎನ್ ಕೌಂಟರ್ ಮಾಡಿದ್ದ ದಯಾನಾಯಕ್ ಎಂಬ ಕರ್ನಾಟಕದ ವ್ಯಕ್ತಿ ಯಾವುದೋ ಆಪಾದನೆಯಿಂದ ಸಸ್ಪೆಂಡ್ ಆಗಿ ವಿಚಾರಣೆ ಎದುರಿಸುತ್ತಿದ್ದ ದಿನಗಳಲ್ಲಿ ಟಿವಿ ಕ್ಯಾಮರಾ ಮುಂದೆ ಗೊಳೋ ಎಂದು ಅತ್ತಿದ್ದನು ನೋಡಿದ್ದೇನೆ.

ಸುಶಾಂತ್ ಸಿಂಗ್ ರಜಪೂತ್ ಎಂಬ ಪ್ರಖ್ಯಾತ ನಟ ಮತ್ಯಾವುದೋ ಕಾರಣದಿಂದ ಆತ್ಮಹತ್ಯೆಯನ್ನೇ ಮಾಡಿಕೊಳ್ಳುತ್ತೇನೆ. ಈಗ ನಮ್ಮ ನಡುವೆಯೇ ದೊಡ್ಡ ದೊಡ್ಡ ರಾಜಕಾರಿಣಿ, ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸಿ ದರ್ಪ ಮೆರೆಯುತ್ತಿದ್ದ ರೇವಣ್ಣ ಕೇವಲ ಒಂದೇ ದಿನದಲ್ಲಿ ತನ್ನ ಪರಿಸ್ಥಿತಿಗೆ ಅಳುತ್ತಿದ್ದಾರೆ…..

ಹೀಗೆ ಇನ್ನೂ ಹಲವಾರು ಜನರಿದ್ದಾರೆ. ಅರೆ, ಮನುಷ್ಯ ಅಳಬಾರದೆ, ಕಷ್ಟದ ಸಮಯದಲ್ಲಿ ಎಂತಹವರಿಗೂ ದುಃಖ ಉಮ್ಮಳಿಸಿ ಬರುತ್ತದೆ. ಅದರಲ್ಲಿ ವಿಶೇಷವೇನು ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹೌದು, ಅಳುವುದರಲ್ಲಿ‌ ಆಶ್ಚರ್ಯವಿಲ್ಲ, ತಪ್ಪಿಲ್ಲ. ಆದರೆ ಅಳುವುದಕ್ಕೆ ಅಥವಾ ಸಾಯುವುದಕ್ಕೆ ಅವರಿಗಿರುವ ಕಾರಣಗಳು ಮಾತ್ರ ಅವರ ದುರ್ಬಲ ಮನಸ್ಥಿತಿಯನ್ನು ‌ತೋರಿಸುತ್ತದೆ ಮತ್ತು ಸಾಮಾನ್ಯರಾದ ನಾವು ಮತ್ತಷ್ಟು ದೃಢವಾಗಲು ಪ್ರೇರೇಪಿಸುತ್ತದೆ……

ಇವರೆಲ್ಲಾ ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಹುಟ್ಟಿನಿಂದ ಆಗರ್ಭ ಶ್ರೀಮಂತರಾಗಲಿ, ರಾಜ ಮಹಾರಾಜರ ವಂಶಸ್ಥರಾಗಲಿ ಅಲ್ಲ. ತಮ್ಮ ಪ್ರತಿಭೆ, ಚಾಕಚಕ್ಯತೆ, ಅವಕಾಶ, ಶ್ರಮದಿಂದ ಜನಪ್ರಿಯರಾದವರು…..

ನಮ್ಮ ನಮ್ಮ ‌ವಯಸ್ಸು ಮತ್ತು ಅನುಭವದಲ್ಲಿ ಈ ಭಾರತೀಯ ಸಮಾಜವನ್ನು ಅರ್ಥಮಾಡಿಕೊಂಡಿರುವ ಮಟ್ಟಿಗೆ ಬಹುತೇಕ ಯಾರದೇ ಜೀವನವಿರಲಿ, ಅದರಲ್ಲಿ ಸಂಪೂರ್ಣ ಸುಖ ಸಂತೋಷಗಳೇ ತುಂಬಿ ತುಳುಕುತ್ತದೆ ಎಂಬುದು ನಂಬಲಸಾಧ್ಯ…..

ಕಷ್ಟ ಸುಖಗಳನ್ನು ಅಳೆಯುವ ಮಾಪನ ಇಲ್ಲ ನಿಜ, ಆದರೆ ‌ಅಧಿಕಾರ, ಹಣ, ಆಸ್ತಿ, ಕೌಟುಂಬಿಕ ಪರಿಸರ, ಆರೋಗ್ಯ, ವಾಸಿಸುವ ಸ್ಥಳ, ಉದ್ಯೋಗ ಮುಂತಾದ ಕೆಲವು ಮಾನದಂಡಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಕೆಲವರು ಹೆಚ್ಚು ಯಶಸ್ವಿ ಎಂತಲೂ ಮತ್ತು ಮೇಲೆ ಹೇಳಿದ ವಿಷಯಗಳು ಸರಿಯಾಗಿ ದೊರೆಯದೆ ಮೂಲಭೂತ ಅವಶ್ಯಕತೆಗಳಿಗೇ ತಮ್ಮ ಜೀವನವನ್ನು ಸವೆಸುತ್ತಿರುವ ಜನರನ್ನು ಬಡವರು, ಯಶಸ್ವಿಯಾಗದವರು, ನತದೃಷ್ಟರು ಎಂದೂ ಕರೆಯಲಾಗುತ್ತದೆ……

ಈ ದೃಷ್ಟಿಯಿಂದ ನೋಡಿದಾಗ ರೇವಣ್ಣ – ಶಿವಕುಮಾರ್ – ಸಿದ್ದಾರ್ಥ – ಸುಶಾಂತ್ ಸಿಂಗ್ ಮುಂತಾದವರು ಈ ಸಮಾಜದಲ್ಲಿ ಬಹುದೊಡ್ಡ ಯಶಸ್ಸನ್ನು, ಅಧಿಕಾರವನ್ನು, ಜನಪ್ರಿಯತೆಯನ್ನು, ಜೀವನದ ಹೆಚ್ಚು ಕಾಲ ಸುಖ ಸಂತೋಷದ ದಿನಗಳನ್ನು ಅನುಭವಿಸಿದವರು……

ಒಮ್ಮೆ ಅವರು ನಮ್ಮ ಸಮಾಜದ ಅತ್ಯಂತ ಕೆಳಗಿನ ಜನರನ್ನು ನೋಡಿದರೆ ಸಾಕು, ಅವರು ಹಿಮಾಲಯದಷ್ಟು ಎತ್ತರದಲ್ಲಿ ಇರುವುದು ತಿಳಿದುಕೊಂಡು ಮನಸ್ಸಿಗೆ ಖಂಡಿತ ಸಮಾಧಾನ ಮಾಡಿಕೊಳ್ಳಬಹುದು. ತಮಗೆ ಈ ಕ್ಷಣದಲ್ಲಿ ಬಂದಿರುವುದು ಒಂದು ಸಣ್ಣ ಪ್ರಮಾಣದ ಕಷ್ಟ. ಮುಂದೆ ಇನ್ನೇನೋ ದೊಡ್ಡ ಸ್ಥಾನ ಗಳಿಸಲು ಇದರಿಂದ ತೊಂದರೆಯಾಗಬಹುದೇ ಹೊರತು ಬದುಕಿನ ಸಾಮಾನ್ಯ ಸೌಕರ್ಯಗಳಲ್ಲಿ ಅವರು ಎಷ್ಟೋ ಜನರಿಗಿಂತ ಈಗಾಗಲೇ ಮುಂದಿದ್ದಾರೆ ಎಂದು ಅರ್ಥಮಾಡಿಕೊಂಡರೆ ಅವರ ಕಷ್ಟಗಳು ಯಾವ ಲೆಕ್ಕಕ್ಕೂ ಇಲ್ಲ ಎಂದೇ ಅನಿಸುತ್ತದೆ……

ಅವರ ಸಹಾಯಕ್ಕೆ ಬಹಳಷ್ಟು ಹಾದಿಗಳು ಇರುತ್ತದೆ. ಆದರೆ ಅನೇಕರಿಗೆ ಎಲ್ಲಾ ರೀತಿಯ ಮಾರ್ಗಗಳು ಮುಚ್ಚಿ ಬಿಡುತ್ತದೆ……

ಬದುಕಿನ ಒಂದು ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಂಡರೆ ಜೀವನ ಸ್ವಲ್ಪ ಸರಳ, ಸುಲಭ ಮತ್ತು ನೆಮ್ಮದಿಯಾಗಬಹುದು….

ಮೊದಲಿಗೆ,
ನಾವು ಇಲ್ಲಿಯವರೆಗೆ ಬದುಕಿರುವುದೇ ಒಂದು ಸಾಧನೆ ಮತ್ತು ನೆಮ್ಮದಿಗೆ ಕಾರಣವಾಗಬೇಕು. ಎಷ್ಟೋ ಜನ ಇದರಿಂದಲೇ ವಂಚಿತರಾಗಿರುವುದನ್ನು ನೆನಪಿಸಿಕೊಳ್ಳಿ….. ಅಕಾಲಿಕ, ಆಕಸ್ಮಿಕ, ಸಾವುಗಳು…..

ಎರಡನೆಯದಾಗಿ,
ನಮ್ಮ ಊಟ ಬಟ್ಟೆ ವಸತಿಗಳು ನಮ್ಮ ಅವಶ್ಯಕತೆಗೆ ಮತ್ತು ಆಸಕ್ತಿಗೆ ತಕ್ಕಂತೆ ಇದ್ದರೆ ಅದು ಮತ್ತೊಂದು ಸಾಧನೆ – ತೃಪ್ತಿಯ ಕಾರಣ ಎಂದೇ ಭಾವಿಸಿ……

ಮೂರನೆಯದಾಗಿ,
ನಮ್ಮ ರಕ್ತ ಸಂಬಂಧಗಳು, ಸಂಸಾರ, ಬಂಧು ಬಳಗಗಳು, ಸ್ನೇಹಿತರು ಹೆಚ್ಚು ಘರ್ಷಣೆಗಳಿಲ್ಲದೆ ( ಸಣ್ಣ ಪುಟ್ಟ ವಿರಸಗಳನ್ನು ಹೊರತುಪಡಿಸಿ ) ಒಂದು ತಕ್ಕಮಟ್ಟಿನ ಸೌಹಾರ್ದ ಸಂಬಂಧ ಉಳಿದಿದ್ದರೆ ಅದು ಮಗದೊಂದು ಸಾಧನೆ ಮತ್ತು ಅದೃಷ್ಟ ಎಂದೇ ಪರಿಗಣಿಸಿ……

ನಾಲ್ಕನೆಯದಾಗಿ,
ಇರುವ ಅವಕಾಶದಲ್ಲಿ ನಮ್ಮ ಪ್ರತಿಭೆ, ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ದೊರೆತು ಅದರಿಂದ ಹಣ, ಅಧಿಕಾರ, ಜನಪ್ರಿಯತೆ ದೊರೆತರೆ ಅದು ಬದುಕಿನ ಬಹುದೊಡ್ಡ ಸಾಧನೆ, ಸಾರ್ಥಕತೆ ಮತ್ತು ಬೋನಸ್ ಎಂದು ಪರಿಗಣಿಸಿ……

ಐದನೆಯದಾಗಿ,
ಇದನ್ನು ಮೀರಿ ನೀವು ನಿರೀಕ್ಷಿಸದ ಅನೇಕ ಉತ್ತಮ ಗುಣಮಟ್ಟದ ಎಲ್ಲವೂ ದೊರೆತರೆ ( ಇದು ತೀರಾ ಅಪರೂಪ ) ನಿಮ್ಮನ್ನು ನೀವು ಅತ್ಯಂತ ಸುಖಿ ಎಂದೇ ಭಾವಿಸಿ…..

ಆರನೆಯದಾಗಿ,
ಒಂದು ವೇಳೆ ನೀವು ಎಲ್ಲಾ ಯಶಸ್ಸುಗಳನ್ನು ಗಳಿಸಿ, ಯಾವುದೋ ಕಾರಣದಿಂದ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿ ಬಂದಾಗ ಅಥವಾ ಕಳೆದುಕೊಂಡರೆ ಆಗಲೂ ಸದ್ಯದ ಪರಿಸ್ಥಿತಿಯನ್ನು ನೆನೆದು ಧೃತಿಗೆಡಬೇಡಿ. ಮತ್ತೆ ಬದುಕಿರುವುದೇ ಒಂದು ಸಾಧನೆ ಎಂಬ ತೀರ್ಮಾನಕ್ಕೆ ಬನ್ನಿ. ಹೊರ ಪ್ರಪಂಚದ ಅನೇಕರ ಕುಹುಕದ ಮಾತುಗಳಿಗೆ ಹೆಚ್ಚಿನ ಮಾನ್ಯತೆ ನೀಡದೆ ನೀವು ಸೃಷ್ಟಿಯ ಜೀವಿ ಎಂದು ಭಾವಿಸಿ ಅಂತರ್ಮುಖಿಯಾಗಿ ನಿಮ್ಮನ್ನು ನೀವು ಸಂತೈಸಿಕೊಳ್ಳಿ…….

ಯಶಸ್ಸಿನ ಇಮೇಜ್ ಒಂದು ಭ್ರಮೆ ‌ಎಂಬುದನ್ನು ಜೀವನಪರ್ಯಂತ ಮರೆಯದಿರಿ. ಮೇಲೆ ಏರಿದವರು ಮತ್ತೆ ಕೆಳಗೆ ಇಳಿಯುವ ಸಾಧ್ಯತೆಯನ್ನು ಮೊದಲೇ ನಿರೀಕ್ಷಿಸಿ. ಅದು ಬದುಕಿನ ಭಾಗವೇ ಆಗಿರುತ್ತದೆ ಎಂದು ತಿಳಿದುಕೊಳ್ಳಿ……

ನೀವು ಈಗಾಗಲೇ ಯಶಸ್ಸಿನ ಹಾದಿಯಲ್ಲಿದ್ದು ಬದುಕಿನ ಬಗ್ಗೆ ಒಂದು ನಿರ್ದಿಷ್ಟ ಮತ್ತು ಸ್ಪಷ್ಟ ಅಭಿಪ್ರಾಯ ಹೊಂದಿದ್ದರೆ ಈ ನನ್ನ ಅಭಿಪ್ರಾಯ ನಿರ್ಲಕ್ಷಿಸಿ…….

ತುಂಬಾ ಅತೃಪ್ತಿ, ಅಸಮಾಧಾನ, ಅಸಹನೆ, ಕಷ್ಟ, ಬಡತನ ಇರುವವರಾದರೆ ದಯವಿಟ್ಟು ಸ್ವಲ್ಪ ಯೋಚಿಸಿ……..

  • ವಿವೇಕಾನಂದ. ಎಚ್.ಕೆ.

Share It

You cannot copy content of this page