ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್‌ನ ಹಾಲಿ ಶಾಸಕ ವಿನಯ್ ಕಲಕರ್ಣಿ ತಮ್ಮ ಮತ ಹಾಕುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿದೆ.
ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಆರೋಪ ಹೊತ್ತಿರುವ ವಿನಯ್ ಕುಲಕರ್ಣಿ ಅವರನ್ನು ಧಾರವಾಡದಿಂದ ಗಡಿಪಾರು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮತದಾನ ಮಾಡುವ ಸಲುವಾಗಿಯಾದರೂ, ಧಾರವಾಡಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ವಿನಯ್ ಕುಲಕರ್ಣಿ ಕೋರಿದ್ದರು.
ವಿನಯ್ ಅವರ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ತಿರಸ್ಕರಿಸಿ ಆದೇಶಿಸಿದ್ದಾರೆ. ಅಲ್ಲದೆ, ಅರ್ಜಿದಾರರು ಧಾರವಾಡ ಜಿಲ್ಲೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದ್ದು, ಈಗಾಗಲೇ ಹಲವು ಬಾರಿ ವಿವಿಧ ಕಾರಣಗಳಿಗೆ ಅವರು ಧಾರವಾಡ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅರ್ಜಿಗಳೆಲ್ಲ ತಿರಸ್ಕೃತಗೊಂಡಿವೆ. ಹಾಗಾಗಿ, ಈ ಅರ್ಜಿಯನ್ನೂ ಮಾನ್ಯ ಮಾಡಬಾರದು ಎಂದು ತನಿಖಾಧಿಕಾರಿಗಳ ಪರ ವಕೀಲರು ವಾದಿಸಿದ್ದರು.