ಅಪರಾಧ ಉಪಯುಕ್ತ ಸುದ್ದಿ

“ಪೊಲೀಸ್” ವರ್ಕ್ ಸ್ಟೈಲ್ ಹೈಕೋರ್ಟ್ ಗರಂ

Share It


ಬೆಂಗಳೂರು: ಪೊಲೀಸರು ಎಂದ್ರೆ ಸಿನಿಮಾದಲ್ಲಿ ಬರುವಂತೆ ಎಲ್ಲ ಆದ್ಮೇಲೆ ಬರೋರು ಅನ್ನೋ ಮಾತು ಸಾರ್ವಜನಿಕ ವಲಯದಲ್ಲೂ ಇದೆ. ಇಂತಹದ್ದೇ ವಿಚಾರಕ್ಕೆ ಹೈಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರಸ್ತುತ ತನಿಖೆಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತನಿಖಾಧಿಕಾರಿ ಮರಣೋತ್ತರ ಪರೀಕ್ಷೆ(ಪೋಸ್ಟ್ ಮಾರ್ಟಮ್)ನಡೆಯುವ ಸ್ಥಳಕ್ಕೆ ಖುದ್ದು ಭೇಟಿ ನೀಡುವುದಿಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೂ ಘಟನಾ ಸ್ಥಳದ ಪಂಚನಾಮೆ/ಮಹಜರು ವರದಿ ಬಗ್ಗೆ ಸರಿಯಾಗಿ ನಾಲ್ಕು ವಾಕ್ಯ ಬರೆಯಲು ಬರುವುದಿಲ್ಲ.

ಕಾನೂನು ಬಗ್ಗೆ ಆಳವಾದ ಮಾಹಿತಿ ಇರದ ಪೊಲೀಸ್ ಮುಖ್ಯ ಕಾನ್‌ಸ್ಟೇಬಲ್ ತನಿಖೆ ನಡೆಸಿ ವರದಿ ಸಿದ್ಧಪಡಿಸಿದರೆ, ಅದಕ್ಕೆ ವೃತ್ತ ನಿರೀಕ್ಷಕರು, ಸಬ್ ಇನ್ಸ್ಪೆಕ್ಟರ್ ಸಹಿ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಇದು ಪ್ರಸ್ತುತ ತನಿಖೆಗಳಲ್ಲಿ ನಡೆಯುತ್ತಿದೆ ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.

ಸರ್ಕಾರಿ ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮ ನಡೆಸಿ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ತಿಳಿಸಿಕೊಡುವುದು ಸೂಕ್ತ ಎಂದು ನ್ಯಾಯಮೂರ್ತಿ ವಿ. ಶ್ರಿಷಾನಂದ ಪೀಠ ಸಲಹೆ ನೀಡಿದೆ. ಅಲ್ಲದೇ, ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿಲ್ಲ. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೇಲಧಿಕಾರಿಗಳು ವಿಐಪಿ ಬಂದೋಬಸ್ತ್ಗೆ ಹೋಗುತ್ತಾರೆ, ಕಿರಿಯ ಅಧಿಕಾರಿಗಳೇ ತನಿಖೆ ನಡೆಸಿ, ವರದಿ ಬರೆದು ಬಿಸಾಡುತ್ತಾರೆ. ಪ್ರತಿದಿನ ವಿಐಪಿಯೊಬ್ಬರು ನಗರಕ್ಕೆ ಬರುತ್ತಾರೆ. ಅವರ ಸುಗಮ ಸಂಚಾರ ವ್ಯವಸ್ಥೆ ಹಾಗೂ ಬಂದೋಬಸ್ತ್ಗೆ ಎಲ್ಲಾ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಬೆಳಗ್ಗೆದ್ದರೆ ಪೊಲೀಸರು ಬಂದೋಬಸ್ತ್ ಕೆಲಸದಲ್ಲಿ ಇರುತ್ತಾರೆ. ಇನ್ಯಾವಾಗ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಪ್ರಶ್ನಿಸುವ ಮೂಲಕ ಸದ್ಯದ ಪರಿಸ್ಥಿತಿಯನ್ನು ಟೀಕಿಸಿದರು.

ಇನ್ಸ್ಪೆಕ್ಟರ್ ಹಾಗೂ ಸಬ್‌ಇನ್ಸ್ಪೆಕ್ಟರ್ ಬಂದೋಬಸ್ತ್ ಕೆಲಸದಲ್ಲಿದ್ದರೆ, ಹೆಡ್ ಕಾನ್‌ಸ್ಟೇಬಲ್ ತನಿಖೆ ನಡೆಸಿ, ವರದಿ ಸಿದ್ಧಪಡಿಸುತ್ತಾರೆ. ವರದಿಗೆ ಸರ್ಕಲ್ ಇನ್ಸ್ಪೆಕ್ಟರ್ ಅಥವಾ ಸಬ್ ಇನ್ಸ್ಪೆಕ್ಟರ್ ಸಹಿ ಮಾಡಿ, ಕೋರ್ಟ್ಗೆ ಸಲ್ಲಿಸುತ್ತಾರೆ. ಹೆಡ್ ಕಾನ್‌ಸ್ಟೇಬಲ್‌ಗೆ ಕಾನೂನು ಬಗ್ಗೆ ಏನು ಗೊತ್ತಿರುತ್ತದೆ? ಅವರಲ್ಲಿ ಕೋರ್ಟ್ ತೀರ್ಪುಗಳ ಬಗ್ಗೆ ಮಾಹಿತಿ ಏನಿರುತ್ತದೆ? ಎಂದರು.

ಆರೋಪಿ ಘಟನೆ ಸ್ಥಳಕ್ಕೆ ಹೇಗೆ ಬಂದ? ಮರಳಿ ಹೇಗೆ ಹೋದ? ಹೇಗೆ ಕೃತ್ಯ ಎಸಗಿದ? ಆರೋಪಿಯನ್ನು ಯಾರಾದರೂ ನೋಡಿರುವ ಸಾಧ್ಯತೆ ಇದೆಯೇ? ಘಟನಾ ಸ್ಥಳದ ಸುತ್ತ ಏನೇನಿದೆ? ಎಂಬ ಸಂಪೂರ್ಣ ಅಪರಾಧ ಘಟನೆಯ ಚಿತ್ರಣವನ್ನು ಮಹಜರು/ಪಂಚನಾಮೆ ವರದಿ ನೀಡುತ್ತದೆ. ಈ ಎಲ್ಲಾ ವಿವರ ತಿಳಿಯದೇ ಹೋದರೆ ತನಿಖೆ ಹೇಗೆ ಸರಿ ದಾರಿಯಲ್ಲಿ ನಡೆಯುತ್ತದೆ. ಈ ತಪ್ಪುಗಳನ್ನು ಪೊಲೀಸರು ಸರಿಪಡಿಸಿಕೊಳ್ಳಬೇಕು. ತನಿಖಾಧಿಕಾರಿ ಸೂಕ್ತವಾಗಿ ಮಹಜರು ಮಾಡಬೇಕು. ಮಾಸ್ಕ್ ಧರಿಸಿ ಶವ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಬೇಕು. ಕ್ರಿಮಿನಲ್ ಕಾನೂನುಗಳನ್ನು ತಿಳಿದಿರಬೇಕು ಎಂದು ಸಲಹೆ ನೀಡಿದರು.


Share It

You cannot copy content of this page