ರಾಜಕೀಯ ಸುದ್ದಿ

ಪ್ರಜ್ವಲ್ ರೇವಣ್ಣ ವಿರುದ್ಧ ಸಹನೆ ತೋರಬೇಕಿಲ್ಲ

Share It

ನವದೆಹಲಿ, (ಮೇ.6): ಹಾಸನ ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಅವರಂತಹ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ. ಅಂತಹ ವ್ಯಕ್ತಿಗಳ ವಿರುದ್ಧ ಸಹನೆ ತೋರಬೇಕಾದ ಅಗತ್ಯ ಇಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಆದ್ರೆ, ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದು ಮೋದಿ ಕಿಡಿಕಾರಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಿರುವ ಮೋದಿ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಕ್ರಮ ಜರುಗಿಸುವ ಜವಾಬ್ದಾರಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ಇದೆ. ಸಹಸ್ರಾರು ವಿಡಿಯೋಗಳ ಇವೆ ಎಂದಾದರೆ ಅವು ಜೆಡಿಎಸ್ ಪಕ್ಷವು ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅವಧಿಯದ್ದಾಗಿವೆ ಎನ್ನುವುದು ತಿಳಿದುಬಂದಿದೆ.

ಅವರು ಅಧಿಕಾರದಲ್ಲಿ ಇದ್ದಾಗ ಆ ವಿಡಿಯೋಗಳನ್ನು ಒಟ್ಟುಗೂಡಿಸಿಕೊಂಡು, ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಆ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.

ಆತ ದೇಶದಿಂದ ಹೊರಹೋದ ಬೆನ್ನಲ್ಲಿಯೇ ಈ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದ್ದು, ಇಡೀ ಬೆಳವಣಿಗೆ ಬಹಳ ಅನುಮಾನಾಸ್ಪದವಾಗಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಈ ಬಗ್ಗೆ ಮಾಹಿತಿ ಇದ್ದಿದ್ದರೆ ನಿಗಾ ಇಡಬೇಕಿತ್ತು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಏನನ್ನೂ ಮಾಡಲಿಲ್ಲ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರಕ್ಕೂ ಇದರ ಬಗ್ಗೆ ಮಾಹಿತಿಯೂ ಸಹ ನೀಡಲಿಲ್ಲ. ಅಂದರೆ ಇದು ಪೊಲಿಟಿಕಲ್ ಗೇಮ್ ಆಗಿತ್ತು. ಅವರೊಂದಿಗೆ ಮೈತ್ರಿ ಇದ್ದ ಕಾಲದಿಂದಲೂ ಈ ವಿಡಿಯೋಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಹಾಗಂತ ನಮ್ಮ ವಿಚಾರ ಇದಲ್ಲ. ಯಾವುದೇ ಅಪರಾಧಿಗಳನ್ನು ಬಿಡಬಾರದು ಎನ್ನುವುದಷ್ಟೇ ನಮ್ಮ ಉದ್ದೇಶ. ನಮ್ಮ ದೇಶದಲ್ಲಿ ಇಂತಹ ರಾಜಕೀಯ ಆಟಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದು ಮೋದಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿಯವರಿಗೆ ಸಂಬಂಧಿಸಿದಂತೆ, ಬಿಜೆಪಿಗೆ ಸಂಬಂಧಿಸಿದಂತೆ, ನಮ್ಮ ಸಂವಿಧಾನಕ್ಕೆ ಸಂಬಂಧಿಸಿದಂತೆ, ಅಂತವರ ವಿರುದ್ಧ ಶೂನ್ಯ ಸಹಿಷ್ಣುತೆ ಇರಬೇಕೆಂದು ನನ್ನ ಸ್ಪಷ್ಟ ಅಭಿಪ್ರಾಯ. ಲಭ್ಯವಿರುವ ಕಾನೂನು ಆಯ್ಕೆಗಳಲ್ಲಿ ಇಂತವರಿಗೆ ಕಠಿಣ ಶಿಕ್ಷೆ ಆಗಬೇಕು. ನಾವು ಆತನನ್ನು ವಾಪಾಸ್‌ ಕರೆತರಬೇಕು. ಕಠಿಣ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಅನುಮಾನಗಳೂ ಇರಕೂಡದು ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page