ಯಾದಗಿರಿ: ಮಹೀಂದ್ರ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಗ್ರಾಮದ ಸೋಮಪ್ಪ ಎಂಬ 30 ವರ್ಷದ ಯುವಕ ತನ್ನ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಕಳೆದ ಹದಿನೈದು ದಿನಗಳಿಂದ ಮಹೀಂದ್ರ ಫೈನಾನ್ಸ್ ಸಿಬ್ಬಂದಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಸೋಮಪ್ಪ ಮಹೀಂದ್ರ ಫೈನಾನ್ಸ್‌ನಿಂದ ಬುಲೆರೋ ಪಿಕಪ್ ವಾಹನದ ಮೇಲೆ ಸಾಲ ಪಡೆದಿದ್ದರು. ಕಾರಣಾಂತರದಿಂದ ಕಳೆದ ಐದು ತಿಂಗಳ ಕಂತು ಕಟ್ಟಿರಲಿಲ್ಲ. ಹೀಗಾಗಿ, ಕಂತು ಕಟ್ಟುವಂತೆ ಸಿಬ್ಬಂದಿ ಮನೆಗೆ ಬಂದು ಪೀಡಿಸುತ್ತಿದ್ದರು ಎನ್ನಲಾಗಿದೆ.
ಸಿಬ್ಬಂದಿ ಕಿರುಕುಳದ ಬಗ್ಗೆ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದ ಸೋಮಪ್ಪ, ಇಂದು ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

