ಅಪರಾಧ ರಾಜಕೀಯ ಸುದ್ದಿ

ರಾಜ್ಯದಲ್ಲಿ ಹೆಚ್ಚುತ್ತಿದೆ ಪಾಗಲ್ ಪ್ರೇಮಿಗಳ ಕಾಟ

Share It

ಬೆಳಗಾವಿ: ಪ್ರೀತಿ ಮಾಡುವಂತೆ ಹೆಣ್ಣು ಮಕ್ಕಳನ್ನು ಪೀಡಿಸುವ, ಪ್ರೀತಿಗೆ ಒಪ್ಪದಿದ್ದರೆ ಅವರಿಗೆ ತೊಂದರೆ ಕೊಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಅನೇಕ ಪ್ರಕರಣಗಳು ಕೊಲೆಯಂತಹ ಗಂಭೀರ ಸ್ಥಿತಿಯನ್ನು ಮುಟ್ಟುತ್ತಿರುವುದು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ.

ಬೆಳಗಾವಿ ಜಿಲ್ಲೆ ಕಿಣೈ ಗ್ರಾಮದಲ್ಲಿ ಯುವಕನೊಬ್ಬ ಬಿಕಾಂ ಓದುತ್ತಿರುವ ಯುವತಿಗೆ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದಾನೆ. ಆಕೆ ಪ್ರೀತಿಯನ್ನು ಒಪ್ಪದಿದ್ದ ಕಾರಣಕ್ಕೆ ಆಕೆಯ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ, ಬೆದರಿಕೆ ಹಾಕಿದ್ದಾನೆ. ಆಕೆಯನ್ನು ಮದುವೆ ಮಾಡಿಕೊಡುಂತೆ ಆಕೆಯ ತಾಯಿಗೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಕಿಣೈ ಗ್ರಾಮದಲ್ಲಿ ತಾಯಿ ಮಗಳು ವಾಸವಿದ್ದು, ಯುವತಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕಾಲೇಜಿಗೆ ಹೋಗುವಾದ ಬರುವಾಗ, ಅದೇ ಗ್ರಾಮದ ತಿಪ್ಪಣ್ಣ ಎಂಬ ಯುವಕ ಆಕೆಗೆ ಪ್ರೀತಿ ಮಾಡುವಂತೆ ಕಾಟ ಕೊಡುತ್ತಿದ್ದ. ಅದೇ ಕಾರಣಕ್ಕೆ ಕೆಲ ಕಾಲ ವಿದ್ಯಾರ್ಥಿನಿ ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದಳು.

ಇದೀಗ ಆಕೆಯ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ತಿಪ್ಪಣ್ಣ, ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದಾನೆ. ಈ ಹಿಂದೆ ಕೂಡ ಆತ ಆಕೆಯ ಮನೆಯ ಬಾಗಿಲಿಗೆ ಬೆಂಕಿಯಿಟ್ಟಿದ್ದ. ಪ್ರೀತಿಯನ್ನು ಒಪ್ಪದಿದ್ದರೆ ಕೊಲೆ ಮಾಡುವಂತೆ ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಬೇಸತ್ತು ಪೊಲೀಸರಿಗೆ ದೂರು ನೀಡಿದೆ.

ಇತ್ತೀಚೆಗೆ ವರದಿಯಾದ ನಾಲ್ಕೆöÊದು ಕೊಲೆ ಪ್ರಕರಣಗಳ ಹಿಂದಿನ ಕಾರಣ ಪ್ರೇಮಪೀಡನೆ. ಅದರಲ್ಲೂ ಬಹುದೊಡ್ಡ ಸುದ್ದಿಯಾದ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ, ಅಂಜಲಿ ಕೊಲೆ ಪ್ರಕರಣ ಮತ್ತು ಮಡಕೇರಿಯಲ್ಲಿ ನಡೆದ ಕೊಲೆ ಪ್ರಕರಣದ ಹಿಂದೆ ಇದೇ ರೀತಿಯ ಪ್ರೇಮ ಸಂಬAಧಿತ ಉದ್ದೇಶಗಳೇ ಇವೆ.

ಪ್ರೀತಿಸುತ್ತಿದ್ದು, ಮುಸ್ಲಿಂ ಎನ್ನುವ ಕಾರಣಕ್ಕೆ ಮದುವೆಗೆ ಒಲ್ಲೆ ಎಂದಳು ಎಂಬುದು ಹುಬ್ಬಳ್ಳಿಯಲ್ಲಿ ಸದ್ದು ಮಾಡಿದ ನೇಹಾ ಕೊಲೆ ಪ್ರಕರಣದಲ್ಲಿ ಆರೋಪಿ ಮತ್ತು ಆಕೆಯ ಕುಟುಂಬದ ಹೇಳಿಕೆ. ಫಯಾಜ್ ಎಂಬ ಆರೋಪಿ ನೇಹಾಗಳನ್ನು ಪ್ರೀತಿ ಮಾಡುತ್ತಿದ್ದ ಎಂದು ಹೇಳಲಾಗಿದ್ದು, ಅವರಿಬ್ಬರು ಜತೆಗಿರುವ ಕೆಲ ಫೋಟೋಗಳು ವೈರಲ್ ಆಗಿದ್ದವು. ಆದರೆ, ಕೊನೆಗೆ ನಿರಾಕರಿಸಿದಳು ಎಂಬ ಕಾರಣಕ್ಕೆ ಕೊಲೆ ನಡೆದಿತ್ತು.

ಅದೇ ರೀತಿಯಲ್ಲಿ ಹುಬ್ಬಳ್ಳಿಯಲ್ಲಿಯೇ ಮತ್ತೊಂದು ಪ್ರಕರಣ ನಡೆದಿದ್ದು, ಬೆಳಗ್ಗೆ ೫.೩೦ಕ್ಕೆ ಮನೆಗೆ ನುಗ್ಗಿದ ಆರೋಪಿ, ಯುವತಿಯನ್ನು ಚಾಕುವಿನಿಂದ ಇರಿದು ಕೊಂಡಿದ್ದ. ಅಲ್ಲಿ ಕೂಡ ಆಕೆ ಪ್ರೀತಿ ಮಾಡುತ್ತಿದ್ದು, ಬರಬರುತ್ತಾ ನನ್ನನ್ನು ನಿರಾಕರಿಸುತ್ತಿದ್ದಳು. ಹೀಗಾಗಿ, ಕೊಲೆ ಮಾಡಿದ್ದೇನೆ ಎಂಬAತಹ ಹೇಳಿಕೆಯನ್ನು ಆರೋಪಿ ನೀಡುತ್ತಿದ್ದಾನೆ.

ಇನ್ನು ಮಡಕೇರಿಯಲ್ಲಿ ಪ್ರೀತಿಸುವಂತೆ ಪೀಡಿಸಿ, ಮದುವೆಗೂ ಒಪ್ಪಿಸಿದ್ದ ಆರೋಪಿ, ೧೮ ವರ್ಷವಾಗದ ಕಾರಣಕ್ಕೆ, ಆಕೆಯ ಪೊಲೀಸರು ಮಧ್ಯಪ್ರವೇಶ ಮಾಡಿ ಮದುವೆ ನಿಲ್ಲಿಸಿದ್ದಕ್ಕೆ ಯುವತಿಯನ್ನೇ ತಲೆ ಕಡಿದು ಕೊಲೆ ಮಾಡಿದ್ದ ಪ್ರಕರಣ ವರದಿಯಾಗಿತ್ತು. ಆಕೆಯ ರುಂಡ ಹುಡುಕಲು ಎರಡು ದಿನವಾಗಿತ್ತೆಂದರೆ, ಕೊಲೆಯ ಭೀಕರತೆ ಎಷ್ಟಿತ್ತು ಎಂಬುದು ಅರ್ಥವಾಗುತ್ತದೆ.

ಇವೆಲ್ಲವೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿ, ಸುದ್ದಿಯಾದ ಕಾರಣಕ್ಕೆ ಎಲ್ಲರಿಗೂ ಗೊತ್ತಾಗಿದೆ. ಸುದ್ದಿಯಾಗದೇ ಅದೆಷ್ಟೋ ಇಂತಹ ಪ್ರಕರಣಗಳು ರಾಜ್ಯದಲ್ಲಿ ನಡೆದಿರಬಹುದು. ಪ್ರೀತಿಸುವಂತೆ ಪೀಡಿಸಿ, ಯುವತಿಯರಿಗೆ ತೊಂದರೆ ಕೊಡುವತ್ತಿರುವ ಪ್ರಕರಣಗಳು ಅದೆಷ್ಟೋ ಇರಬಹುದು. ಇದಕ್ಕೆ ಸರಕಾರ ಮತ್ತು ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ. ಯುವತಿಯರಿಗೆ ಸುರಕ್ಷತಾ ಮನೋಭಾವ ಮೂಡಿಸಬೇಕಿದೆ.

ಪ್ರೀತಿ ಮಾಡುವಂತೆ ಪೀಡಿಸುವುದು ಒಂದು ಮಾನಸಿಕ ಮನಸ್ಥಿತಿ. ಇಂತಹ ಮನಸ್ಥಿತಿಗೆ ಯುವಕರಲ್ಲಿ ಚಟಗಳು, ಅವರು ಬೆಳೆಸಿಕೊಂಡಿರುವ ಹವ್ಯಾಸಗಳು ಕಾರಣವಾಗುತ್ತಿವೆ. ಸಾಮಾನ್ಯವಾಗಿ ಇಂತಹ ಕೊಲೆಗಳು ನಡೆಯುತ್ತಿರುವುದು ಅಪರಾಧ ಹಿನ್ನೆಲೆಯಿರುವ ಆರೋಪಿಗಳಿಂದಲೇ ಹೆಚ್ಚು. ಕೆಲ ಘಟನೆಗಳಲ್ಲಷ್ಟೇ ಬಹಳ ಬೇಸತ್ತು ಕೊಲೆಯಂತಹ ಪ್ರಯತ್ನಕ್ಕೆ ಆರೋಪಿಗಳು ಕೈ ಹಾಕುತ್ತಿದ್ದಾರೆ. ಇಂದಿನ ಯುವ ಸಮಾಜವನ್ನು ಮಾನಸಿಕವಾಗಿ ಗಟ್ಟಿಗೊಳಿಸುವಂತಹ ಪ್ರಯತ್ನಗಳು ನಡೆದಾಗ ಮಾತ್ರ ಇಂತಹದ್ದೆಲ್ಲ ಕಡಿಮೆಯಾಗುತ್ತದೆ ಎನ್ನುತ್ತಾರೆ ಮಾನಸಿಕ ತಜ್ಞರು.


Share It

You cannot copy content of this page