ಬೆಂಗಳೂರು, ಏ.26: ರಾಜ್ಯದ ಲೋಕಸಭೆ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಸರಾಸರಿ ಶೇ.70ರಷ್ಟು ಮತದಾನವಾಗಿದೆ.
ಮಂಡ್ಯ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಪ್ರಮಾಣದ ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಎಂದಿನಂತೆ ರಾಜಧಾನಿ ಬೆಂಗಳೂರಿನ ಮತದಾರರಲ್ಲಿ ನಿರುತ್ಸಾಹ ಕಂಡುಬಂದಿದ್ದು, ಮತದಾನದ ಪ್ರಮಾಣ ನಿರೀಕ್ಷೆಯಂತೆ ಏರಿಕೆ ಆಗಿಲ್ಲ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದುದು ಕಂಡುಬಂತು.
ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ. ಆರಂಭದಲ್ಲಿ ಕೈಕೊಟ್ಟ ಮತಯಂತ್ರ. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪದಂತಹ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ.
ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಉತ್ಸಾಹದಿಂದಲೇ ಮತ ಚಲಾಯಿಸುತ್ತಿದ್ದುದು ಕಂಡುಬಂತು. ಮಧ್ಯಾಹ್ನ ಬಿರು ಬಿಸಿಲು ಹೆಚ್ಚಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು.ಮತಗಟ್ಟೆಗಳಿಗೆ ಹೆಚ್ಚಾಗಿ ಮಹಿಳೆಯರು ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಯುವ ಮತದಾರರು, ನವಮತದಾರರಲ್ಲಿ ಉತ್ಸಾಹ ಹೆಚ್ಚಾಗಿರುವುದು ಹಲವೆಡೆ ಕಂಡುಬಂತು. ರಾಜಕಾರಣಿಗಳು, ಚಲನಚಿತ್ರ ನಟ, ನಟಿಯರು, ಖ್ಯಾತ ಕ್ರಿಕೆಟ್ ಪಟುಗಳು, ಕಿರುತೆರೆ ಕಲಾವಿದರು ಸೇರಿದಂತೆ ವಿವಿಧ ಗಣ್ಯರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಗಮನ ಸೆಳೆದರು.