ಸುದ್ದಿ

ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನದ ಶೇಕಡಾವಾರು ಪ್ರಮಾಣ

Share It

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ರಾಜ್ಯದ ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26, ಶುಕ್ರವಾರ) ಸಂಜೆ ಮುಕ್ತಾಯವಾಗಿದೆ.
ಸಣ್ಣ ಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ತಮ್ಮ ಕುಟುಂಬದವರೊಂದಿಗೆ ಬಂದು ಮಂಡ್ಯದಲ್ಲಿ ಮತದಾನ ಮಾಡಿದರೆ, ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ಸಿನಿಮಾ ನಟ-ನಟಿಯರು ಕೂಡ ಸಮೀಪದ ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾರೆ.

ಶೇಕಡಾವಾರು ಮತದಾನವನ್ನು ನೋಡುವುದಾದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಮತದಾನವಾಗಿದೆ. ಇಲ್ಲಿ ಶೇ.74.87 ರಷ್ಟು ಮತಗಳು ಚಲಾವಣೆಯಾಗಿವೆ. ಉಳಿದಂತೆ ಉಡುಪಿ ಚಿಕ್ಕಮಗಳೂರಿನಲ್ಲಿ ಶೇ 72.13, ಹಾಸನ ಶೇ 72.13, ದಕ್ಷಿಣ ಕನ್ನಡ ಶೇ 71.83, ಚಿತ್ರದುರ್ಗ ಶೇ 67, ತುಮಕೂರು ಶೇ 72.10, ಮೈಸೂರು ಶೇ 65.85, ಚಾಮರಾಜನಗರ ಶೇ 69.60, ಬೆಂಗಳೂರು ಗ್ರಾಮಾಂತರ ಶೇ 61.78, ಬೆಂಗಳೂರು ಉತ್ತರ ಶೇ 50.04, ಬೆಂಗಳೂರು ಕೇಂದ್ರ ಶೇ 48.61, ಬೆಂಗಳೂರು ದಕ್ಷಿಣ ಶೇ 49.37, ಚಿಕ್ಕಬಳ್ಳಾಪುರ ಶೇ 70.97, ಕೋಲಾರ ಶೇ 71.26 ರಷ್ಟು ಮತದಾನವಾಗಿದೆ.

ಕೆಲವರು ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತದಾನ ಮಾಡಿದರೆ, ಇನ್ನೂ ಕೆಲವೆಡೆ ನವ ದಂಪತಿಗಳು ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಮತದಾನಕ್ಕಾಗಿಯೇ ಕೆಲ ಕನ್ನಡಿಗರು ಅಮೆರಿಕ, ಲಂಡನ್ ಹಾಗೂ ದುಬೈ ಸೇರಿದಂತೆ ವಿದೇಶದಿಂದ ಬಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೆಲವರು ಬೋಟ್ ಮೂಲಕ ನದಿ ದಾಟಿ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಖುಷಿ ಪಟ್ಟಿದ್ದಾರೆ.

ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಕೆಲವೆಡೆ ಸಣ್ಣ ಪುಟ್ಟ ಘಟನೆಗಳ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮತಗಟ್ಟೆ ಮೇಲೆ ಕಲ್ಲುತೂರಾಟ ನಡೆಸಿ ಇವಿಎಂಗೆ ಹಾನಿ ಮಾಡಿರುವುದಾಗಿ ವರದಿಯಾಗಿದೆ. ಹನೂರು ತಾಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಮತಗಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವಿಎಂಗೆ ಹಾನಿ ಮಾಡಲಾಗಿದೆ ಎಂದು ಹೇಳಲಾಗಿದೆ.


Share It

You cannot copy content of this page