ರಾಜಕೀಯ ಸುದ್ದಿ

ಕೇಂದ್ರ ಜಲ ಶಕ್ತಿ ಸಚಿವರ ಭೇಟಿಯಾದ ನೀರಾವರಿ ಸಚಿವ ರಾಮಲಿಂಗಾ ರೆಡ್ಡಿ: ರಾಜ್ಯದ ನೀರಾವರಿ ಯೋಜನೆಗಳಿಗೆ ನೆರವಿಗೆ ಮನವಿ 

Share It

ನವದೆಹಲಿ: ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ. ಆರ್ ಪಾಟೀಲ್ ಅವರನ್ನು ಸಿಎಂ ಡಿಕೆ ಶಿವಕುಮಾರ್ ಮತ್ತು ಬೃಹತ್ ನೀರಾವರಿ ಸಚಿವ ರಾಮಲಿಂಗಾ ರೆಡ್ಡಿ ಭೇಟಿಯಾದರು.

ಭೇಟಿಯ ವೇಳೆ ರಾಜ್ಯದ ಹಲವು ಪ್ರಮುಖ ನೀರಾವರಿ ಮತ್ತು ಬಾಕಿ ಇರುವ ಜಲಸಂಪನ್ಮೂಲ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಸವಿಸ್ತಾರವಾದ ಮನವಿಯನ್ನು ಸಲ್ಲಿಸಲಾಯಿತು. ರಾಜ್ಯದ ಕೋಟ್ಯಂತರ ರೈತರ ಕಲ್ಯಾಣ, ಕುಡಿಯುವ ನೀರಿನ ಭದ್ರತೆ ಹಾಗೂ ಬರ ಪರಿಹಾರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಮೇಕೆದಾಟು ಯೋಜನೆ, ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2ರ (KWDT II) ತೀರ್ಪಿನ ಗೆಜೆಟ್ ಅಧಿಸೂಚನೆ, ಕಳಸಾ-ಬಂಡೂರಿ ಯೋಜನೆಗೆ ಅಗತ್ಯ ಅನುಮೋದನೆಗಳು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಘೋಷಣೆಯಾಗಿದ್ದ ಬಾಕಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. 

ನಮ್ಮ ರಾಜ್ಯದ ರೈತರ ಹಿತರಕ್ಷಣೆ ಮತ್ತು ಕರ್ನಾಟಕದ ದೀರ್ಘಕಾಲೀನ ಅಭಿವೃದ್ಧಿಗೆ ಪೂರಕವಾಗಿರುವ ಈ ಎಲ್ಲಾ ಪ್ರಮುಖ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರವು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ, ಸಕಾಲದಲ್ಲಿ ಅಗತ್ಯ ಅನುಮತಿ ಹಾಗೂ ಬೆಂಬಲವನ್ನು ನೀಡಲಿದೆ ಎಂದು ಆಶಿಸುತ್ತೇನೆ. ನಮ್ಮ ನೆಲ, ಜಲ ಮತ್ತು ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. 

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಚಿವ ಹಾಗೂ ದೆಹಲಿಯಲ್ಲಿ ಸರಕಾರದ ವಿಶೇಷ ಪ್ರತಿನಿಧಿ  ಟಿಬಿ ಜಯಚಂದ್ರ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 


Share It

You cannot copy content of this page