ಉಪಯುಕ್ತ ರಾಜಕೀಯ ಸುದ್ದಿ

ಕೊನೆಗೂ ರಾಜ್ಯಕ್ಕೆ ಬಂತು ಬರಪರಿಹಾರದ ಹಣ…

Share It

ನವದೆಹಲಿ: ಕೊನೆಗೂ ಕರ್ನಾಟಕಕ್ಕೆ ನೀಡಬೇಕಾಗಿದ್ದ ಬರ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಕರ್ನಾಟಕದ ರೈತರಿಗೆ 2023ನೇ ವರ್ಷದ ಬರಪೀಡಿತ ಕೃಷಿ ಜಮೀನುಗಳಿಗೆ ಒಟ್ಟು 3,454 ಕೋಟಿ ರೂಪಾಯಿ ಬರಪರಿಹಾರ ನೀಡಿದೆ. ಈ ಬರಪರಿಹಾರ ಹಣವನ್ನು ಎನ್.ಡಿ.ಆರ್.ಎಫ್ ಮೂಲಕ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಿದೆ.
2023ನೇ ವರ್ಷದಲ್ಲಿ ಕರ್ನಾಟಕದ ಬರಪೀಡಿತ ಪ್ರದೇಶಗಳ ರೈತರಿಗೆ ಈ ಬರಪರಿಹಾರ ಹಣ ತಲುಪಲಿದೆ.
ಇದೇ ವೇಳೆ ತಮಿಳುನಾಡಿನ ರೈತರಿಗೆ ಕೇಂದ್ರಸರ್ಕಾರ 2023ನೇ ವರ್ಷದಲ್ಲಿ ಆದ ನೆರೆಪರಿಹಾರದ ರೂಪದಲ್ಲಿ 275 ಕೋಟಿ ರೂಪಾಯಿ ಮೊತ್ತದ ಪರಿಹಾರ ನೀಡಿದೆ.
ಇದಕ್ಕೂ ಮುನ್ನ ಕರ್ನಾಟಕದಲ್ಲಿ 2023ನೇ ದಾಖಲೆ ಪ್ರಮಾಣದಲ್ಲಿ ಮುಂಗಾರು ಮಳೆ, ಹಿಂಗಾರು ಮಳೆ ಸಕಾಲಕ್ಕೆ ಬರದೆ ರೈತರು ದನಕರುಗಳಿಗೆ ಕನಿಷ್ಠ ಮೇವು ಒದಗಿಸಲಾಗದಂತಹ ಬರಗಾಲ ಎದುರಿಸಿದ್ದರು‌. ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 18,174 ಕೋಟಿ ರೂಪಾಯಿ ಮೊತ್ತದ ಬರಪರಿಹಾರ ನೀಡಿ ಎಂದು ದಾಖಲೆ ಸಮೇತ ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿತ್ತು‌. ಆದರೆ ಕೇಂದ್ರ ಸರ್ಕಾರ ಮಾತ್ರ ಕರ್ನಾಟಕ ಸರ್ಕಾರ ತಡವಾಗಿ ಬರಪರಿಹಾರಕ್ಕೆ ಮನವಿ ಸಲ್ಲಿಸಿದೆ ಎಂದು ಸುಪ್ರೀಂಕೋರ್ಟ್ ಮುಂದೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ಸ್ಪಷ್ಟನೆ ನೀಡಿತ್ತು. ಆದರೆ ಕಳೆದ ವಾರ ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಬರಪೀಡಿತ ಪ್ರದೇಶಗಳ ರೈತರಿಗೆ ಇನ್ನೊಂದು ವಾರದಲ್ಲಿ ಬರಪರಿಹಾರ ನೀಡುವುದಾಗಿ ತಿಳಿಸಿತ್ತು. ಅದರಂತೆ ಇದೀಗ ಕೇಂದ್ರ ಸರ್ಕಾರ ಕರ್ನಾಟಕದ
ಬರಪೀಡಿತ ಪ್ರದೇಶಗಳ ರೈತರಿಗೆ ಬರಪರಿಹಾರದ ಹಣವನ್ನು ಎನ್.ಡಿ.ಆರ್.ಎಫ್ ರೂಪದಲ್ಲಿ 3,454 ಕೋಟಿ ರೂಪಾಯಿ ಹಣವನ್ನು ಕಳುಹಿಸಿದೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿಕೆ ನೀಡಿ, ಈಗಲಾದರೂ ಸುಪ್ರೀಂಕೋರ್ಟ್ ಮುಂದೆ ಹೇಳಿದಂತೆ ಕೇಂದ್ರ ಸರ್ಕಾರ ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ 3,454 ಕೋಟಿ ರೂಪಾಯಿ ಕಳುಹಿಸಿರುವುದರಿಂದ ನಮ್ಮ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


Share It

You cannot copy content of this page