ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಆಶ್ರಮದ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70 ನೇ ಜನ್ಮ ದಿನಾಚರಣೆ ಮತ್ತು ಆಶ್ರಮದ 45 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಂದಾಗಿ ಬೆಂಗಳೂರು-ಕನಕಪುರ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಮತ್ತು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ ಕನಕಪುರ ಕಡೆಗೆ ಹೋಗುವ ವಾಹನಗಳು ಬೆಂಗಳೂರು-ಕೆಂಗೇರಿ-ಬಿಡದಿ-ರಾಮನಗರ ಮೂಲಕ ಕನಕಪುರ ತಲುಪಲು ಸೂಚಿಸಲಾಗಿದೆ. ಅದೇ ರೀತಿ, ಕನಕಪುರದಿಂದ ಬೆಂಗಳೂರಿಗೆ ಬರುವ ವಾಹನಗಳು ಕನಕಪುರ-ಹಾರೋಹಳ್ಳಿ-ಕಗ್ಗಲೀಪುರ ರಸ್ತೆ-ಬನ್ನೇರುಘಟ್ಟ ಮೂಲಕ ನಗರವನ್ನು ಪ್ರವೇಶಿಸಬೇಕು.

ನೈಸ್ ರಸ್ತೆಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಸಂಚಾರ ನಿರ್ಬಂಧವಿರುತ್ತದೆ ಮತ್ತು ತುಮಕೂರು ರಸ್ತೆಯಿಂದ ಕನಕಪುರ ಕಡೆಗೆ ಹೋಗುವವರು ಸಿಎಂಟಿಐ ಜಂಕ್ಷನ್ ಬಳಿ ಬಲ ತಿರುವು ಪಡೆದು ಡಾ. ರಾಜ್ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಪ್ರಯಾಣಿಸಬೇಕು.
ಆರ್ಟ್ ಆಫ್ ಲಿವಿಂಗ್ನಲ್ಲಿ ಮೋದಿ ಕಾರ್ಯಕ್ರಮ; ಬೆಳಿಗ್ಗೆ 11 ಗಂಟೆಗೆ, ಮೋದಿ ಅವರು ಎಚ್ಎಎಲ್ನಿಂದ ವಿಶೇಷ ಹೆಲಿಕಾಪ್ಟರ್ನಲ್ಲಿ ಉದಿಪಾಳ್ಯ ಗ್ರಾಮದ ಬಳಿಯ ಆಶ್ರಮಕ್ಕೆ ಆಗಮಿಸಲಿದ್ದಾರೆ. ಆಶ್ರಮದ 45 ನೇ ವಾರ್ಷಿಕೋತ್ಸವ ಮತ್ತು ಗುರೂಜಿಯವರ ಜನ್ಮದಿನದ ಸ್ಮರಣಾರ್ಥ ನಿರ್ಮಿಸಲಾದ ಭವ್ಯವಾದ ಹೊಸ ಧ್ಯಾನ ಮಂದಿರವನ್ನು ಅವರು ಉದ್ಘಾಟಿಸಲಿದ್ದಾರೆ. ಮೋದಿ ಮಧ್ಯಾಹ್ನ 12.30 ರವರೆಗೆ ಆಶ್ರಮದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

