ಬೆಂಗಳೂರು : ಸ್ನೇಹಿತರೊಂದಿಗಿನ ಗಲಾಟೆಯಲ್ಲಿ ಖಾಸಗಿ ಅಂಗಕ್ಕೆ ಗಂಭೀರ ಗಾಯಗೊಂಡಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ಬೆಂಗಳೂರಿನಲ್ಲಿ ವರದಿಯಾಗಿದೆ.
ಮೃತನನ್ನ ತ್ರಿಪುರಾ ಮೂಲದ ತಪನ್ ನಾಥ್ (27) ಎಂದು ಗುರುತಿಸಲಾಗಿದೆ. ಭವಿಷ್ಯದಲ್ಲಿ ತಂದೆಯಾಗುವ ಸಾಮರ್ಥ್ಯ ಕಳೆದುಕೊಂಡಿದ್ದೇನೆ ಎಂದು ತೀವ್ರ ಖಿನ್ನತೆಗೊಳಗಾಗಿದ್ದ ತಪನ್ ನಾಥ್ ಈಜಿಪುರದ ತನ್ನ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕೋರಮಂಗಲದ ಪಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ತಪನ್ ನಾಥ್ ಭಾನುವಾರ ಕೆಲಸಕ್ಕೆ ಹಾಜರಾಗಿರಲಿಲ್ಲ. ರಾತ್ರಿ 11.30ರ ಸುಮಾರಿಗೆ ಆತನ ರೂಮ್‌ಮೇಟ್ ಮರಳಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ತಪನ್ ನಾಥ್ ಪೋಷಕರು ನೀಡಿರುವ ದೂರಿನನ್ವಯ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ತಪನ್ ಸ್ನೇಹಿತರು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಮೂರ್ನಾಲ್ಕು ತಿಂಗಳ ಹಿಂದೆ ಸ್ನೇಹಿತರು ಪಾರ್ಟಿ ಮಾಡುವಾಗ ಮದ್ಯದ ಅಮಲಿನಲ್ಲಿ ಜಗಳ ಉಂಟಾಗಿತ್ತು. ಆಗ ಸ್ನೇಹಿತರು ನಡೆಸಿದ ಹಲ್ಲೆಯಿಂದ ತಪನ್‌ನ ಖಾಸಗಿ ಅಂಗಕ್ಕೆ ಗಂಭೀರ ಗಾಯಗಳಾಗಿದ್ದವು. ಅವಮಾನದಿಂದ ಈ ವಿಷಯವನ್ನು ನಮಗೆ ತಿಳಿಸದೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದ.
ವೈದ್ಯರು ಗಾಯಗಳಿಗೆ ಚಿಕಿತ್ಸೆ ನೀಡಿದ್ದರಾದರೂ, ಹಲ್ಲೆಯಿಂದಾಗಿ ಭವಿಷ್ಯದಲ್ಲಿ ಆತನಿಗೆ ತಂದೆಯಾಗುವ ಸಾಮರ್ಥ್ಯವಿಲ್ಲ ಎಂದು ತಿಳಿಸಿದ್ದರಂತೆ. ಇದರಿಂದ ತೀವ್ರ ಆಘಾತಕ್ಕೊಳಗಾಗಿದ್ದ ತಪನ್ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ. ಅದೇ ಕಾರಣದಿಂದ ಆತ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾನೆ ಎಂದು ತಪನ್ ಕುಟುಂಬಸ್ಥರು ಆರೋಪಿಸಿದ್ದಾರೆ.
“ಮೃತನ ಕುಟುಂಬದವರ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ನೇಹಿತರು ಹಾಗೂ ಕುಟುಂಬದವರು ಈ ಕಾರಣದಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ವೈದ್ಯಕೀಯ ವರದಿ ಬರುವ ಮುನ್ನ ನಾವು ಅದೇ ಕಾರಣ ಎಂದು ಧೃಢೀಕರಿಸಲು ಸಾಧ್ಯವಿಲ್ಲ. ತಪನ್‌ಗೆ ಚಿಕಿತ್ಸೆ ನೀಡಿದ ವೈದ್ಯರ ಹೇಳಿಕೆ, ಮರಣೋತ್ತರ ಪರೀಕ್ಷಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.

