ಕಲಬುರಗಿ: ಕಳೆದ 2023ನೇ ವರ್ಷದಲ್ಲಿ ಭೀಕರ ಬರದಿಂದ ಇಡೀ ಕಲ್ಯಾಣ ಕರ್ನಾಟಕ ಅಕ್ಷರಶಃ ಕಂಗೆಟ್ಟು ಹೋಗಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹೇಳತೀರದು.
ಕಳೆದ ಎರಡ್ಮೂರು ದಶಕಗಳಿಗೆ ಹೋಲಿಸಿದ್ರೆ ಈ ಬಾರಿ ರಣಬಿಸಿಲು ಬೆಂಕಿಯುಂಡೆಯಾಗಿತ್ತು. ಜೊತೆಗೆ ಕಳೆದ ಬಾರಿ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಕಲಬುರಗಿ ಜಿಲ್ಲೆಯಲ್ಲಿ ಬಹುತೇಕ ರೈತರು ಇರೋಬರೋ ಬೆಳೆಗಳನ್ನ ಕಳೆದುಕೊಂಡು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಹೀಗಾಗಿ ಸರ್ಕಾರ ಬರದಿಂದ ಕಂಗೆಟ್ಟ ರೈತರಿಗೆ ಆಸರೆಯಾಗಲೆಂದು ಬರ ಪರಿಹಾರ ಹಣ ಬಿಡುಗಡೆ ಮಾಡಿದೆ. ಇದ್ರಿಂದ ಖರ್ಚಿಗೆ ಒಂದಿಷ್ಟು ರೊಕ್ಕ ಬಂತಲ್ಲ ಎಂದು ಜಿಲ್ಲೆಯ ರೈತರು ಹಿಗ್ಗಿದ್ದರು. ಆದರೆ ಹೀಗೇ ಬಂದ ಬರಪರಿಹಾರದ ಹಣವನ್ನ ಬ್ಯಾಂಕುಗಳು ರೈತರ ಅಕೌಂಟ್‌ಗೆ ಜಮಾ ಮಾಡುವುದನ್ನ ಬಿಟ್ಟು, ಗಾಯದ ಮೇಲೆ ಬರೆ ಎಳೆದಂತೆ ಸಾಲದ ನೆಪ ಹೇಳಿ ಅಕೌಂಟ್ ಗಳನ್ನೇ ಫ್ರೀಜ್ ಮಾಡ್ತಿದ್ದಾರಂತೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಜೇವರ್ಗಿ ತಾಲೂಕಿನಲ್ಲಿ ಅತೀ ಹೆಚ್ಚು ರೈತರಿಗೆ ಈ ಸಮಸ್ಯೆ ಆಗಿದೆ. ಇನ್ನು ವಿಷಯ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಪರಿಹಾರ ಕಡಿತ ಮಾಡದಂತೆ ಆದೇಶ ನೀಡಿದರೂ ಬ್ಯಾಂಕುಗಳು ಕ್ಯಾರೇ ಎನ್ನುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಈ ಕ್ರಮಕ್ಕೆ ರೈತ ಸಂಘಟನೆಗಳು ಕಿಡಿಕಾರಿವೆ.
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಸಹ ಬರದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ಕೈಕೊಟ್ಟಿದ್ದವು. ಹೀಗಾಗಿ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರಿಗೆ ಆಸರೆಯಾಗಲೆಂದು ಕಲಬುರಗಿ ಜಿಲ್ಲೆಯ 2 ಲಕ್ಷ 63 ಸಾವಿರ ರೈತರಿಗೆ 274 ಕೋಟಿ ರೂ ಪರಿಹಾರ ಹಣವನ್ನ ಈಗಾಗಲೇ ಡಿಬಿಟಿ ಮಾಡಲಾಗಿದೆ. ಆದರೆ ರೈತರ ಅಕೌಂಟ್‌ಗಳಿವೆ ಡಿಬಿಟಿ ಆದ ಪರಿಹಾರ ಹಣವನ್ನ ಬ್ಯಾಂಕ್ ಅಧಿಕಾರಿಗಳು ಸಾಲದ ರೂಪದಲ್ಲಿ ಕಡಿತ ಮಾಡಿಕೊಳ್ತಿರೋ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು.
ರೈತರಿಂದ ದೂರುಗಳು ಬಂದ ಬೆನ್ನಲ್ಲೇ ಅಲರ್ಟ್ ಆದ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಲೀಡ್ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಯಾವುದೇ ಕಾರಣಕ್ಕೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಬಂದ ಬರ ಪರಿಹಾರ ಹಣವನ್ನ ಸಾಲದ ರೂಪದಲ್ಲಿ ಕಡಿತ ಮಾಡಿಕೊಳ್ಳದೇ ಅವರ ಅಕೌಂಟ್‌ಗೆ ಜಮಾ ಮಾಡಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ. ಅಲ್ಲದೇ ಇಂತಹ ದೂರುಗಳು ಬಂದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅದೆನೇ ಇರಲಿ ಒಂದೆಡೆ ಭೀಕರ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ರೈತರಿಗೆ ಇದೀಗ ಬ್ಯಾಂಕ್ ಅಧಿಕಾರಿಗಳು ಶಾಕ್ ನೀಡುತ್ತಿದ್ದು, ಮುಂದೇನು? ಅನ್ನುವ ಚಿಂತೆಯಲ್ಲಿ ರೈತಾಪಿ ವರ್ಗ ಮುಳುಗಿದ್ದಾರೆ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೊ ಗಾದೆ ಮಾತಿನಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತ ಮೂಗುದಾರ ಹಾಕಿ ಸಂಕಷ್ಟದಲ್ಲಿರೋ ರೈತರ ನೆರವಿಗೆ ಧಾವಿಸಬೇಕಾಗಿದೆ.