ಬೆಂಗಳೂರು: ಮಹಿಳೆಯೊಬ್ಬರಿಗೆ ವಂಚಿಸಲಾಗಿದ್ದ ಬಹುತೇಕ ಹಣವನ್ನು ಸೈಬರ್ ವಂಚಕರ ಖಾತೆಯಿಂದ ಹಿಂಪಡೆಯುವಲ್ಲಿ ನಗರದ ಪೂರ್ವ ವಿಭಾಗದ ಸಿಇಎನ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
52 ವರ್ಷದ ಮಹಿಳೆ ಕಳೆದುಕೊಂಡಿದ್ದ 2.66 ಕೋಟಿ ರೂ.ಗಳ ಪೈಕಿ ಎರಡು ಕಂತಿನಲ್ಲಿ 2.20 ಕೋಟಿ ರೂ. ಹಣವನ್ನು ಸೈಬರ್ ವಂಚಕರಿಂದ ಹಿಂಪಡೆದುಕೊಳ್ಳಲಾಗಿದೆ.
ದೂರುದಾರ ಮಹಿಳೆಯ ಮೊಬೈಲ್ಗೆ ಕಳೆದ ಏ. 6ರಂದು ಮೆಸೇಜ್ ಕಳುಹಿಸಿದ್ದ ವಂಚಕ, ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಹಣ ಗೆಲ್ಲಿ ಎಂಬ ಆಫರ್ ನೀಡಿದ್ದ. ಮಹಿಳೆ ಆರಂಭದಲ್ಲಿ ಸಣ್ಣ ಲಾಭವನ್ನೂ ಗಳಿಸಿದ್ದರು. ನಂತರ ಆರೋಪಿ ಕಳುಹಿಸಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಆಕೆಯನ್ನು ಇನ್‌ಸ್ಟಾಗ್ರಾಮ್‌ನ ಗುಂಪೊಂದಕ್ಕೆ ಸೇರಿಸಲಾಗಿತ್ತು. ಇದಾದ ಬಳಿಕ ಕರೆ ಮಾಡಿದ್ದ ವಂಚಕ ಬೇರೆ ಬೇರೆ ಚಾನೆಲ್‌ಗಳನ್ನು ಲೈಕ್ ಮಾಡುವಂತೆ ತಿಳಿಸಿ ಸುಮಾರು 10 ಸಾವಿರ ರೂಪಾಯಿ ಲಾಭಾಂಶ ನೀಡಿದ್ದಾನೆ. ಇದಾದ ನಂತರ ‘ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ದುಪ್ಪಟ್ಟು ಹಣ ನೀಡುವುದಾಗಿ’ ನಂಬಿಸಿದ್ದಾನೆ. ಟೆಲಿಗ್ರಾಂ ಗುಂಪೊಂದಕ್ಕೂ ಆ ಮಹಿಳೆಯನ್ನು ಸೇರಿಸಿಬಿಟ್ಟಿದ್ದ.
ಆ ಗುಂಪಿನಲ್ಲಿದ್ದ ಕೆಲವರು ತಾವು ಮಾಡಿದ ಹೂಡಿಕೆಗೆ ಡಬಲ್ ಹಣ ಗಳಿಸಿದ್ದೇವೆ ಎನ್ನುತ್ತಿದ್ದುದನ್ನು ನಂಬಿ ತಾನೂ ಹೂಡಿಕೆ ಮಾಡಲು ನಿರ್ಧರಿಸಿದ್ದರು. ಅದರಂತೆ ಆರೋಪಿ ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಲು ಪ್ರಾರಂಭಿಸಿದಾಗ ಅದಕ್ಕೆ ಪ್ರತಿಯಾಗಿ ದೊರೆಯುವ ಬಡ್ಡಿದರಗಳನ್ನು ದೃಢೀಕರಿಸುವ ಸಂದೇಶಗಳನ್ನು ಮಹಿಳೆ ನಂಬರಿಗೆ ಕಳುಹಿಸಲಾಗುತ್ತಿತ್ತು. ಏ.19ರವರೆಗೆ ಹೂಡಿಕೆ ಮುಂದುವರೆಸಿದ್ದ ಮಹಿಳೆ ನಂತರದ ದಿನಗಳಲ್ಲಿ ಅನುಮಾನಗೊಂಡು ತನ್ನ ಕುಟುಂಬ ಸ್ನೇಹಿತರೊಂದಿಗೆ ವಿಷಯ ಹಂಚಿಕೊಂಡಾಗ ಇದು ಸೈಬರ್ ಅಪರಾಧ ಎಂಬುದು ಗೊತ್ತಾಗಿದೆ. ತಕ್ಷಣವೇ ಮೋಸ ಹೋದ ಆ ಮಹಿಳೆ ತನ್ನ ಹೂಡಿಕೆಯನ್ನು ವಾಪಸ್ ಕೇಳಿದಾಗ ಸೈಬರ್ ವಂಚಕನು ಆ ಮಹಿಳೆಯ ನಂಬರ್ ಬ್ಲಾಕ್ ಮಾಡಿದ್ದಾನೆ.
ಬಳಿಕ ವಂಚನೆಗೊಳಗಾದ ಆ ಮಹಿಳೆ ತಕ್ಷಣ ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ ಭಾಗಶಃ ಹಣವನ್ನು ಫ್ರೀಜ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ವಂಚನೆಗೊಳಗಾದ ಮಹಿಳೆ ಮೊದಲು 1930ಗೆ ಕರೆ ಮಾಡಿ, ನಂತರ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ವಂಚಕರ ಖಾತೆಯಿಂದ ಇತ್ತೀಚಿನ ದಿನಗಳಲ್ಲಿ ಜಪ್ತಿ ಮಾಡಲಾದ ಗರಿಷ್ಠ ಹಣ ಇದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ: “ದೂರಿನ ನಂತರ ವಂಚಕರ ರಾಜಸ್ಥಾನ, ಪಶ್ಚಿಮ ಬಂಗಾಳ ಮೂಲದ 3 ಬ್ಯಾಂಕ್ ಖಾತೆಗಳಲ್ಲಿ 2 ಕೋಟಿ ರೂ.ಗಿಂತ ಹೆಚ್ಚು ಹಣವಿರುವುದನ್ನು ಪತ್ತೆ ಹಚ್ಚಲಾಯಿತು. ತಕ್ಷಣ ನಾವು ಅವುಗಳನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾದೆವು. ನ್ಯಾಯಾಲಯದ ಅನುಮತಿ ಪಡೆದು ದೂರುದಾರರಿಗೆ 2 ಕಂತಿನಲ್ಲಿ ಹಣ ಹಿಂದಿರುಗಿಸುತ್ತಿದ್ದೇವೆ” ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.