ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮೊದಲ ಬಾರಿಗೆ ಕಾವೇರಿ ನಿಯಂತ್ರಣ ಸಮಿತಿ ಕರ್ನಾಟಕದ ಪರ ಬ್ಯಾಟಿಂಗ್ ಮಾಡಿದೆ. ಇದಕ್ಕೆ ಕಾರಣ ಮಾತ್ರ, ಕಾವೇರಿ ಕೊಳ್ಳದ ನೀರಿಲ್ಲದ ಪರಿಸ್ಥಿತಿ.
ಪ್ರತಿ ಬಾರಿಯಂತೆ ಕಾವೇರಿ ನದಿಯಿಂದ ಕರ್ನಾಟಕ ೫.೩ ಟಿಎಂಸಿ ನೀರನ್ನು ಹರಿಸಬೇಕು ಎಂದು ತಮಿಳುನಾಡು, ನೀರು ನಿಯಂತ್ರಣ ಸಮಿತಿ ಮುಂದೆ ಬೇಡಿಕೆಯಿಟ್ಟಿತ್ತು. ಈ ಬೇಡಿಕೆಯನ್ನು ಸಮಿತಿ ತಿರಸ್ಕರಿಸುವ ಮೂಲಕ ಕನ್ನಡಿಗರಿಗೆ ಕೊಂಚ ರಿಲ್ಯಾಕ್ಸ್ ಮೂಡಿಸಿದೆ.
ಸಮಿತಿ ಅಧ್ಯಕ್ಷ ವಿನೀಶ್ ಗುಪ್ತ ನೇತೃತ್ವದ ಸಮಿತಿಯ ೯೫ ನೇ ಸಭೆಯಲ್ಲಿ, ಕರ್ನಾಟಕದ ಜಲಾಶಯಗಳಲ್ಲಿ ಇರುವ ನೀರು ಕುಡಿಯುವ ಉದ್ದೇಶಗಳಿಗೂ ಸಾಕಾಗುವಷ್ಟಿಲ್ಲ. ಮಳೆಯ ಪ್ರಮಾಣ ಕಡಿಮೆಯಿರುವ ಕಾರಣದಿಂದ ನೀರಿನ ನೈಸರ್ಗಿಕ ಹರಿವು ಕಡಿಮೆಯಿದೆ. ಹೀಗಾಗಿ, ನೀರು ಹರಿಸುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿತು.
ಕಾವೇರಿ ಜಲವಿವಾದ ನ್ಯಾಯಮಂಡಳಿಯ ಆದೇಶದ ಪ್ರಕಾರ ನಿತ್ಯ ೧ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಬೇಕಿದೆ. ಆದರೆ, ಜಲಾಶಯದಲ್ಲಿ ನೀರಿನ ಕೊರತೆಯ ಕಾಋಣಕ್ಕೆ ೧೫೦ ಕ್ಯೂಸೆಕ್ಸ್ ನೀರು ಬಿಳಿಗುಂಡ್ಲು ತಲುಪುವುದು ಕಷ್ಟವಾಗುತ್ತಿದೆ ಎಂಬುದನ್ನು ಸಮಿತಿಯು ಗಮನಿಸಿತು.
ಪೆಬ್ರವರಿಯಿಂದ ಏಪ್ರಿಲ್‌ವರೆಗೆ ಕರ್ನಾಟಕ ೭.೩ ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ, ಈವರೆಗೆ ೨ ಟಿಎಂಸಿ ನೀರು ಮಾತ್ರವೇ ತಮಿಳುನಾಡಿಗೆ ಹರಿದಿದೆ. ಹೀಗಾಗಿ, ಬಾಕಿ ನೀರು ಹರಿಸಬೇಕು ಎಂದು ತಮಿಳುನಾಡು ವಾದ ಮಂಡಿಸಿತ್ತು.
ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ನೀರಿನ ಮಟ್ಟ ಬಹಳ ಕಡಿಮೆಯಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈವರೆಗೆ ಮಳೆ ಬಿದ್ದಿಲ್ಲ, ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ತಲೆದೋರಿದ್ದು, ಜಲಾಶಯಗಳಲ್ಲಿರುವ ನೀರು ಕುಡಯುವ ಉದ್ದೇಶಕ್ಕೂ ಕೊರತೆಯಲ್ಲಿದೆ ಎಂದು ಕರ್ನಾಟಕದ ಅಧಿಕಾರಿಗಳು ವಾದಿಸಿದ್ದರು.
ಕರ್ನಾಟಕದ ವಾದಕ್ಕೆ ಮನ್ನಣೆ ನೀಡಿದ ಸಮಿತಿ, ಪ್ರಸ್ತುತ ಸನ್ನಿವೇಶದಲ್ಲಿ ನೀರು ಹರಿಸಲು ಕರ್ನಾಟಕ ಸರಕಾರಕ್ಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗಿ ಉತ್ತಮವಾಗಿದ್ದರೆ ನೋಡಿಕೊಳ್ಳಬಹುದು. ಈ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನಿಸಬಹುದು ಎಂದು ಹೇಳಿತು. ಮುಂದಿನ ಸಭೆ ಮೇ .೧೬ರಂದು ನಡೆಯಲಿದೆ.