ಪಲನ್ಪುರ: ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿ, ಆಕೆಯ ನಗ್ನ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಅದನ್ನಿಟ್ಟುಕೊಂಡು ಬೆದರಿಸಿ ಆಕೆಯನ್ನು ಸತತ 16 ತಿಂಗಳು ಏಳು ಜನರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬನಸ್ಕಂತ ಜಿಲ್ಲೆಯಲ್ಲಿ ನಡೆದಿದೆ.
ಪಲನ್ಪುರದ ಕಾಲೇಜಿಗೆ ತೆರಳುತ್ತಿದ್ದ 20 ವರ್ಷದ ಯುವತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡಿದ್ದ ಯುವಕನೊಬ್ಬ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಒಮ್ಮೆ ಆಕೆಯನ್ನು ಹೊಟೇಲ್‌ಗೆ ಕರೆದೊಯ್ದು ಊಟದ ನೆಪದಲ್ಲಿ ಆಕೆಯ ಬಟ್ಟೆಯ ಮೇಲೆ ಆಹಾರವನ್ನು ಚೆಲ್ಲಿ, ಅದನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಕೋನೆಗೆ ಕರೆದೊಯ್ದು, ಅಲ್ಲಿ ಆಕೆ ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ವಿಶಾಲ್ ಚೌದರಿ ಎಂಬ ಆರೋಪಿ ಈ ವಿಡಿಯೋ ಬಳಸಿಕೊಂಡು, ಬೆದರಿಸಿ ಆಕೆಯನ್ನು ಸತತ 16 ತಿಂಗಳ ಕಾಲ ಅತ್ಯಾಚಾರ ಮಾಡಿದ್ದಲ್ಲದೆ, ತನ್ನ ಏಳು ಜನ ಸ್ನೇಹಿತರನ್ನು ಜತೆಯಲ್ಲಿ ಕರೆದುಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.
ಪಾಲನ್ ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ವಿಶಾಲ್ ಚೌಧರಿ ಹಾಗೂ ಇನ್ನಿತರ ಏಳು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಆಕೆಯ ನಗ್ನ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.