ಮುಂಬೈ: ದೇಶದ ವಾಣಿಜ್ಯ ನಗರಿಯಲ್ಲಿ ಧಾರಾಕಾರ ವರ್ಷಧಾರೆ ಹಾಗೂ ಬಿರುಗಾಳಿ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂಬೈ ಸೇರಿ ಮಹಾರಾಷ್ಟ್ರದ ಥಾಣೆ, ರತ್ನಗಿರಿ, ರಾಯಗಡ ಜಿಲ್ಲೆಗಳ ಶಾಲೆಗಳಿಗೆ ಸೋಮವಾರ ರಜೆ ನೀಡಲಾಗಿದೆ.
ಮಳೆ ಹಿನ್ನೆಲೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ, ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ನಾಗರಿಕರು ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಬರುವಂತೆ ಮುಂಬೈ ಮಹಾನಗರ ಪಾಲಿಕೆ ಸೂಚನೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ, ಗ್ರೇಟರ್ ಮುಂಬೈ ಪ್ರದೇಶ ಮತ್ತು ಅದರ ಉಪನಗರಗಳಲ್ಲಿ ಸುಮಾರು 150 ರಿಂದ 170 ಮಿಮೀ ಮಳೆಯಾಗಿದೆ. ಗಂಟೆಗೆ 72ರಿಂದ 75 ಕಿಮೀ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದ ಈ ಪ್ರದೇಶದಾದ್ಯಂತ 142 ಮರಗಳು ಅಥವಾ ಕೊಂಬೆಗಳು ಬಿದ್ದ ಘಟನೆ ವರದಿಯಾಗಿವೆ. ಈ ಪರಿಸ್ಥಿತಿ ನಡುವೆ, ಮುಂಬೈ ಮಹಾನಗರ ಪಾಲಿಕೆ ವಾರಾಂತ್ಯದಲ್ಲಿ ವಿವಿಧ ಸಂಸ್ಥೆಗಳ ಸುಮಾರು 10,000 ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿದೆ.
ಕುರ್ಲಾ ಕಮಾನಿಯ ಗೋಮ್ಸ್ ಟೌನ್ ಕಟ್ಟಡದ ಬಳಿ ಮರವೊಂದು ಬಿದ್ದು 63 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ, ಆರೆಕಾಲೋನಿ ಪ್ರದೇಶದಲ್ಲಿ 18 ವರ್ಷದ ಯುವಕನೋರ್ವ ಮರ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ, ಆರೆ ಡೈರಿ ಬಳಿ ನಿರ್ಮಾಣ ಹಂತದಲ್ಲಿದ್ದ ಖಾಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

