ಬೆಂಗಳೂರು: ಪೊಲೀಸ್ ಇಲಾಖೆಯ ಕಾರ್ಯಪಟುತ್ವ ಹಾಗೂ ವೃತ್ತಿಪರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಆದೇಶವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ್ದಾರೆ.
ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ವಿಶೇಷ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳ ನಿಯೋಜನೆಗೆ ಹೊಸ ನಿಯಮಾವಳಿ ಜಾರಿಗೊಳಿಸಲಾಗಿದೆ.
ಆದೇಶದ ಪ್ರಕಾರ, ವಿಶೇಷ ಶಾಖೆಯಲ್ಲಿ ಕರ್ತವ್ಯ ಅವಧಿ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರಲಿದೆ. ಹೊಸದಾಗಿ ನಿಯೋಜನೆಗೊಳ್ಳುವ ಸಿಬ್ಬಂದಿ ಕನಿಷ್ಠ 15 ದಿನಗಳ ಗುಪ್ತವಾರ್ತೆ ಸಂಗ್ರಹಣೆ ತರಬೇತಿ ಪಡೆದಿರಬೇಕು. ತರಬೇತಿ ಪಡೆದವರನ್ನೇ ವಿಶೇಷ ಶಾಖೆಗೆ ನಿಯೋಜಿಸಲಾಗುವುದು.
ಒಂದು ವರ್ಷದ ಕರ್ತವ್ಯ ಪೂರೈಸಿದ ಸಿಬ್ಬಂದಿಯನ್ನು ಕಡ್ಡಾಯವಾಗಿ ದೈನಂದಿನ ಕಾರ್ಯ ನಿರ್ವಾಹಕ ಕರ್ತವ್ಯಕ್ಕೆ ಮರು ನಿಯೋಜಿಸಲಾಗುವುದು. ಘಟಕಾಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

