ಚಿತ್ರರಂಗಕ್ಕೆ ಬೋಲ್ಟೇ ಇಲ್ಲ, ಟೈಟ್ ಮಾಡಿ ಏನು ಪ್ರಯೋಜನ: ಡಿಕೆಶಿಗೆ ಜಗ್ಗೇಶ್ ತಿರುಗೇಟು

Share It

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಧಾನಸೌಧದ ಆವರಣದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಆದರೆ ಸಿನಿಮಾ ಹಬ್ಬದ ಚಾಲನೆಗೆ ಚಿತ್ರರಂಗದ ಅನೇಕ ನಟ-ನಟಿಯರು ಗೈರಾಗಿದ್ದರು. ಸಿನಿಮಾ ಮಂದಿಯ ಈ ನಡೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ಮೇಕೆದಾಟು ಯೋಜನೆಯ ಹೋರಾಟ ಹಾಗೂ ಫಿಲ್ಮ್ ಫೆಸ್ಟಿವಲ್‌ಗೆ ಬಾರದ ಕಲಾವಿದರಿಗೆ, “ಯಾವ ನಟ, ನಟಿಗೆ ಎಲ್ಲೆಲ್ಲಿ ನಟ್ಟು, ಬೋಲ್ಟು ಟೈಟ್‌ ಮಾಡಬೇಕು ಅಂತ ನನಗೆ ಗೊತ್ತಿದೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ವಾರ್ನಿಂಗ್‌ ಕೊಟ್ಟಿದ್ದರು. ಈ ಬಗ್ಗೆ ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಪ್ರತಿಕ್ರಿಯಿಸಿದ್ದಾರೆ.

“ಬೋಲ್ಟೆ ಇಲ್ಲಾ, ಟೈಟ್‌ ಮಾಡಿ ಪ್ರಯೋಜನವೇನು?”
ಈ ಕುರಿತು ಸರಣಿ ಟ್ವೀಟ್ ಮಾಡಿರುವ ನಟ ಜಗ್ಗೇಶ್, “ಈ ಕಾರ್ಯಕ್ರಮ 7 ಗಂಟೆಗೆ.. ನನಗೆ ಆಹ್ವಾನ ಪ್ರತಿಕೆ ತಲುಪಿದ್ದು ಸಂಜೆ 6 ಗಂಟೆಗೆ.. ಜೊತೆಗೆ ಒಗ್ಗಟ್ಟಿಲ್ಲಾ, ಸಂವಾದವಿಲ್ಲಾ, ಒಟ್ಟಾರೆ ಸಂಘವೇ ಕಣ್ಮರೆ! ಕನ್ನಡ ಚಿತ್ರರಂಗ ಅವಸಾನ.. ಕರ್ನಾಟಕದಲ್ಲಿ ಯಾವ ಕಲಾವಿದರು ಏನಾಗಿದ್ದಾರೆ? ಕಲಾವಿದರಾದ ನಮಗೆ ಮಾಹಿತಿಯಿಲ್ಲಾ! ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ, ಇನ್ನು ಟೈಟ್‌ ಮಾಡಿ ಏನು ಪ್ರಯೋಜನ” ಎಂದಿದ್ದಾರೆ ನಟ ಜಗ್ಗೇಶ್.

ಡಿಸಿಎಂ ಡಿಕೆಶಿಗೆ ನಟ ಜಗ್ಗೇಶ್‌ ತಿರುಗೇಟು
“ಒಂದು ಕಮಿಟಿ ಮಾಡಿ, ಅದರಲ್ಲಿ ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು ಮತ್ತು ಪತ್ರಕರ್ತರು ಇರುವಂತೆ ರಚಿಸಿ. ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಗ್ಗಟ್ಟುಗೂಡುವಂತೆ ಚಿಂತನೆಯ ಚಾವಡಿ ರಚನೆಯಾಗಲಿ! ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲಾ ಅನೇಕರಿದ್ದಾರೆ” ಎಂದು ಡಿಕೆಶಿಗೆ ಟಾಂಗ್‌ ಕೊಟ್ಟಿದ್ದಾರೆ ಜಗ್ಗೇಶ್‌.

“ಕಲಾವಿದರು ಒಟ್ಟುಗೂಡಲೆಂದೇ ಡಾ. ರಾಜ್‌ಕುಮಾರ್‌ ಅವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯ, ಅದು ಇಂದು ನಿಷ್ಕ್ರಿಯಗೊಂಡಿದೆ. ಕೂಡಲೇ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ, ಎಲೆಕ್ಷನ್‌ ಮಾಡಿಸಿ. ಕಲಾವಿದರು ಒಂದೆಡೇ ಕೂರುವಂತೆ ಮಾಡಿ. ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆ ಅನೇಕ. ನಿಮ್ಮ ಗಮನಕ್ಕಾಗಿ ತಂದಿರುವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ ಜಗ್ಗೇಶ್‌.

ಡಿಕೆ ಶಿವಕುಮಾರ್‌ ಕೊಟ್ಟ ವಾರ್ನಿಂಗ್‌ ಏನು?
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, “ಚಿತ್ರರಂಗದವರಿಗೆ ಇದು ವಾರ್ನಿಂಗ್‌ ಆದರೂ ಅಂದುಕೊಳ್ಳಿ ಅಥವಾ ರಿಕ್ವೆಸ್ಟ್‌ ಆದರೂ ಅಂದುಕೊಳ್ಳಿ. ನನಗೆ ನಿಮ್ಮ ಮೇಲೆ ಸಿಟ್ಟು ಬಂದಿದೆ. ನಮ್ಮ ನೀರು ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದ್ವಿ. ಆ ಸಂದರ್ಭದಲ್ಲಿ ಸಾಧು ಕೋಕಿಲ ಮತ್ತು ದುನಿಯಾ ವಿಜಯ್‌ ಬಿಟ್ರೆ ಯಾವ ಕಲಾವಿದರು ಬಂದಿಲ್ಲ. ಇದೇನು ಸಿದ್ದರಾಮಯ್ಯ ಅವರ ಮನೆ ಪ್ರೋಗ್ರ್ಯಾಮ್‌ ಅಲ್ಲ ಅಥವಾ ಡಿಕೆಶಿ ಮನೆ ಕಾರ್ಯಕ್ರಮವಲ್ಲ. ಇದು ನನ್ನ ಕಾರ್ಯಕ್ರಮವಲ್ಲ ಇದು ನಿಮ್ಮ ಕಾರ್ಯಕ್ರಮ” ಎಂದು ಗುಡುಗಿದ್ದರು.

ಕೇವಲ 20 ಮಂದಿ ಚಿತ್ರರಂಗದಿಂದ ಬಂದಿದ್ದಾರೆ. ಇವರಿಗಷ್ಟೇನಾ ಸಿನಿಮಾ ಬೇಕಾಗಿರುವುದು? ಎಲ್ಲಾದರೂ ಶೂಟಿಂಗ್‌ ಮಾಡಬೇಕಾದರೆ, ಸರ್ಕಾರ ಪರ್ಮಿಷನ್‌ ಕೊಟ್ಟಿಲ್ಲ ಅಂದ್ರೆ ಸಿನಿಮಾನೇ ನಡೆಯಲ್ಲ. ನನಗೂ ಗೊತ್ತಿದೆ ಯಾರಿಗೆ ಎಲ್ಲೆಲ್ಲಿ ನಟ್ಟು ಬೋಲ್ಟು ಟೈಟ್‌ ಮಾಡಬೇಕು ಅಂತ” ಎಂದು ಡಿಸಿಎಂ ಡಿಕೆಶಿ ನಟ-ನಟಿಯರಿಗೆ ವಾರ್ನಿಂಗ್‌ ಕೊಟ್ಟಿದ್ದರು


Share It

You May Have Missed

You cannot copy content of this page