ದುಬೈ: ಇಲ್ಲಿಂದು ನಡೆದ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿಯ ಗ್ರೂಪ್-ಎ ಅಂತಿಮ ಲೀಗ್ ಪಂದ್ಯದಲ್ಲಿ ಇಂದು ಭಾರತ ನ್ಯೂಜಿಲೆಂಡ್ ವಿರುದ್ಧ 44 ರನ್ ಗಳಿಂದ ಸತತ ಗೆದ್ದು ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆರಿಸಿಕೊಂಡಿತು. ಮೊದಲು ಟೀಂ ಇಂಡಿಯಾ ಬೇಗನೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಓಪನರ್ ಗಳಾದ ರೋಹಿತ್ ಶರ್ಮಾ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಕ್ಕೆ ಶ್ರೇಯಸ್ ಅಯ್ಯರ್ ಮತ್ತು ಅಕ್ಸರ್ ಪಟೇಲ್ 4ನೇ ವಿಕೆಟ್ ಗೆ ಅಮೂಲ್ಯ 98 ರನ್ ಸೇರಿಸಿದರು.
ಬಳಿಕ ಕೆ.ಎಲ್ ರಾಹುಲ್ ಜೊತೆ ಅಯ್ಯರ್ 5ನೇ ವಿಕೆಟ್ ಗೆ ಮಹತ್ವದ 44 ರನ್ ಸೇರಿಸಿದರು. ಶ್ರೇಯಸ್ ಅಯ್ಯರ್ 79 ರನ್, ಅಕ್ಸರ್ ಪಟೇಲ್ 42 ರನ್, ಕೆ.ಎಲ್ ರಾಹುಲ್ 23 ರನ್ ಹಾಗೂ ಕಡೆಯಲ್ಲಿ ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ 45 ರನ್ ಗಳಿಸಿದ ಪರಿಣಾಮ ಟೀಂ ಇಂಡಿಯಾ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಕಲೆ ಹಾಕಿತು. ಕಿವೀಸ್ ಪರ ವೇಗಿ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಬಳಿಕ ನ್ಯೂಜಿಲೆಂಡ್ ಸಹ ಇನಿಂಗ್ಸ್ ಆರಂಭದಲ್ಲೇ ಮೊದಲ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಿಧಾನವಾಗಿ ಆಡಿದ ಕಿವೀಸ್ 41ನೇ ಓವರ್ ವರೆಗೂ ಜಯ ಗಳಿಸುವ ನಿರೀಕ್ಷೆ ಹೊಂದಿತ್ತು. ಆದರೆ ಆಗ 81 ರನ್ ಗಳಿಸಿದ್ದ ಮಾಜಿ ನಾಯಕ ಕೇನ್ ವಿಲಿಯಂಸ್ ಔಟಾಗಿದ್ದೇ ತಡ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲುವುದನ್ನು ಖಚಿತಪಡಿಸಿಕೊಂಡಿತು.
ಇಷ್ಟಾದರೂ 22 ರನ್ ಗಳಿಸಿದ ಕಿವೀಸ್ ಓಪನರ್ ವಿಲ್ ಯಂಗ್, ಕಡೆಯಲ್ಲಿ 28 ರನ್ ಗಳಿಸಿ ಔಟಾದ ನಾಯಕ ಮೈಕಲ್ ಸಾಂತ್ನರ್ ಕೇನ್ ವಿಲಿಯಂಸ್ ಜೊತೆ ಉತ್ತಮ ಬ್ಯಾಟಿಂಗ್ ನಡೆಸಿ ಜಯದ ಆಸೆ ಮೂಡಿಸಿದರು. ಕೊನೆಯಲ್ಲಿ ನ್ಯೂಜಿಲೆಂಡ್ 45.3 ಓವರುಗಳಲ್ಲೇ 205 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಭಾರತ ತಂಡವು 44 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ನ್ಯೂಜಿಲೆಂಡ್ ತಂಡದ 5 ವಿಕೆಟ್ ಪಡೆದ ಸ್ಪಿನ್ನರ್ ವರುಣ್ ಚಕ್ರವರ್ತಿ ಪಂದ್ಯವನ್ನು ಭಾರತದತ್ತ ತಿರುಗಿಸಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದರು.
ಈ ಮೂಲಕ ಎ ಗುಂಪಿನಲ್ಲಿ ಭಾರತ ಅಜೇಯ ಓಟ ಮುಂದುವರೆಸಿ, ಎಲ್ಲಾ 3 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದುಕೊಂಡಿದೆ.
ಇದೀಗ ಭಾರತ ತಂಡವು ಮಾರ್ಚ್ 4 ರಂದು ದುಬೈನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ತಂಡ ಬಿ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡಲಿದೆ.