ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆದ 2025 ರ ರಣಜಿ ಕ್ರಿಕೆಟ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆತಿಥೇಯ ವಿದರ್ಭ ತಂಡ 37 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕೇರಳ ತಂಡವನ್ನು ಹಿಂದಿಕ್ಕಿತು. ಆ ಮೂಲಕ ಆತಿಥೇಯ ವಿದರ್ಭ ತಂಡವು 3ನೇ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದೆ.
ಕಳೆದ ರಣಜಿ ಟ್ರೋಫಿ ಸೀಸನ್ನಲ್ಲಿಯೂ ವಿದರ್ಭ ಫೈನಲ್ ತಲುಪಿತ್ತು, ಆದರೆ ಪ್ರಶಸ್ತಿ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತಿತ್ತು. ಈ ಬಾರಿ ಕರುಣ್ ನಾಯರ್ ಮತ್ತು 21 ವರ್ಷದ ಯುವ ಬ್ಯಾಟ್ಸ್‌ಮನ್ ಡ್ಯಾನಿಶ್ ಮಾಲೆವಾರ್ ಅವರ ಅದ್ಭುತ ಬ್ಯಾಟಿಂಗ್ನ ಆಧಾರದ ಮೇಲೆ ವಿದರ್ಭ ತಂಡ ಈ ಬಾರಿ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕನ್ನಡಿಗ ಕರುಣ್ ಆಟಕ್ಕೆ ಒಲಿದ ಜಯ!: ವಿದರ್ಭ ತಂಡದ ಯಶಸ್ಸಿನಲ್ಲಿ ತಂಡದ ಬ್ಯಾಟ್ಸ್‌ಮನ್, ಕನ್ನಡಿಗ ಕರುಣ್ ನಾಯರ್ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ವಿದರ್ಭ, ಕೇವಲ 24 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಾಗ ನಾಯಕ ಕರುಣ್ ನಾಯರ್ ಮಹತ್ವದ 86 ರನ್ ಹೊಡೆದು, ಡ್ಯಾನಿಶ್ ಮಾಲೆವಾರ್ ಅವರೊಂದಿಗೆ ಸೇರಿ 215 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು. ಇತ್ತ ಡ್ಯಾನಿಶ್ 153 ರನ್‌ಗಳ ಇನ್ನಿಂಗ್ಸ್ ಆಡಿದರು.
ಇಬ್ಬರ ಈ ಇನ್ನಿಂಗ್ಸ್‌ನಿಂದಾಗಿ, ವಿದರ್ಭ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 379 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. 2ನೇ ಇನ್ನಿಂಗ್ಸ್‌ನಲ್ಲೂ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರು. ಇದರಲ್ಲಿ ಕರುಣ್ ನಾಯರ್ 135 ರನ್ ಗಳಿಸಿದರೆ, ಡ್ಯಾನಿಶ್ 73 ರನ್ ಕಲೆ ಹಾಕಿದರು.
ಇದರಿಂದಾಗಿ, ಪಂದ್ಯದ ಕೊನೆಯ ಪಂದ್ಯದ ಕೊನೆಯ ದಿನದಂದು ವಿದರ್ಭ ತಂಡ 2ನೇ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 375 ರನ್ ಗಳಿಸಿತು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ, ಮೊದಲ ಇನ್ನಿಂಗ್ಸ್ ಮುನ್ನಡೆಯಿಂದಾಗಿ ವಿದರ್ಭ ತಂಡಕ್ಕೆ ರಣಜಿ ಕ್ರಿಕೆಟ್ ಟ್ರೋಫಿ ದೊರೆಯಿತು.
ಈ ಪಂದ್ಯದಲ್ಲಿ ಡ್ಯಾನಿಶ್ ಮಾಲೆವಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇಡೀ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹರ್ಷ್ ದುಬೆ, ಟೂರ್ನಿಯ ಆಟಗಾರ ಪ್ರಶಸ್ತಿ ಪಡೆದರು. ಈ ಪಂದ್ಯದಲ್ಲೂ ಮಿಂಚಿದ ಹರ್ಷ್, 44 ಓವರ್‌ಗಳನ್ನು ಬೌಲಿಂಗ್ ಮಾಡಿ 3 ವಿಕೆಟ್‌ಗಳನ್ನು ಪಡೆದರು. ಅವರಲ್ಲದೆ, ದರ್ಶನ್ ನಲ್ಕಂಡೆ ಮತ್ತು ಪಾರ್ಥ್ ರೇಖಾಡೆ ಕೂಡ ತಲಾ 3 ವಿಕೆಟ್ ಪಡೆದರೆ, ಯಶ್ ಠಾಕೂರ್ ಒಂದು ವಿಕೆಟ್ ಪಡೆದರು.
ಕೇರಳದ ಕನಸು ಭಗ್ನ: ಮತ್ತೊಂದೆಡೆ, ಕೇರಳ ತಂಡದ ರಣಜಿ ಚಾಂಪಿಯನ್ ಆಗುವ ಕನಸು ಭಗ್ನವಾಯಿತು. ರಣರೋಚಕತೆಯಿಂದ ಕೂಡಿದ್ದ ಸೆಮಿಫೈನಲ್‌ನಲ್ಲಿ ಕೇವಲ 2 ರನ್‌ಗಳ ಮುನ್ನಡೆಯೊಂದಿಗೆ ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಕೇರಳ ಅನೇಕ ಪ್ರಯತ್ನಗಳ ಹೊರತಾಗಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ವಿದರ್ಭ ತಂಡದ ಬ್ಯಾಟ್ಸ್ ಮನ್ ಡ್ಯಾನಿಶ್ ಮಾಲೆವಾರ್ ಪಾಲಾದರೆ, ಸರಣಿ ಸರ್ವೋತ್ತಮ ಆಟಗಾರ ಪ್ರಶಸ್ತಿ ವಿದರ್ಭ ತಂಡದ ಬೌಲರ್ ಹರ್ಷ ದುಬೆ ಪಾಲಾಯಿತು.